ಮಹಿಳೆ ಮೇಲೆ ಅತ್ಯಾಚಾರ: ಪ್ರತಿಭಟನೆ

ಮೈಸೂರು:ಜ.11: ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಮಹಿಳೆಯೋರ್ವರ ಮೇಲೆ ಸಾಮೂಹಿಕ ಅತ್ಯಾಚಾರಗೈದು ಹತ್ಯೆಗೈದ ಘಟನೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಪ್ರತಿಭಟನೆ ನಡೆಸಿತು.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬದೌನ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ 50ವರ್ಷದ ಮಹಿಳೆಯೋರ್ವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಹತ್ಯೆಗೈದ ಘಟನೆ ನಡೆದಿದ್ದು ದೇವಸ್ಥಾನದ ಅರ್ಚಕರ ಸಮೇತ ಮೂವರು ಈ ಕೃತ್ಯವೆಸಗಿದ್ದಾರೆ ಎಂಬುದು ವರದಿಯಾಗಿದೆ. ಧಾರ್ಮಿಕತೆಯ ಹೆಸರಿನಲ್ಲಿ ಮತ್ತು ಅದರ ಬಗ್ಗೆ ಹೆಮ್ಮೆ ಪಡುವ ಆಡಳಿತದಲ್ಲಿ ದೇವಾಲಯಗಳೇ ಅಪರಾಧಗಳ ತಾಣವಾಗುತ್ತಿರುವುದು ಅರ್ಚಕರೇ ಅಪರಾಧಿಗಳಾಗುತ್ತಿರುವುದು ನಾಚಿಕೆಗೇಡಿನ ವಿಷಯ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಆಡಳಿತವನ್ನು ರಕ್ಷಿಸಲು ಹೊರಟು ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕಿದ ಹಾಗೂ ಸಾರ್ವಜನಿಕರ ಮುಖ್ಯವಾಗಿ ಮಹಿಳೆಯರ ರಕ್ಷಣೆಯ ಕುರಿತು ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿದ ಸರ್ಕಾರದ ನಡೆ ಖಂಡನೀಯ ಎಂದರು.
ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆಯುವ ಸ್ಥಿತಿಯಲ್ಲಿದ್ದ ಆಕೆಯ ಬಗ್ಗೆ ಕುಟುಂಬಸ್ಥರು ದೂರು ನೀಡಿದ ನಂತರವೂ ಘಟನಾ ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿರಲಿಲ್ಲ. ಈ ಹಿಂದೆ ನಡೆದ ಘಟನೆಗಳಂತೆಯೇ ಆಡಳಿತ ಯಂತ್ರದ ನಿಷ್ಕ್ರೀಯತೆ, ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅತ್ಯಾಚಾರ ಸಂತ್ರಸ್ತೆಯ ನೋವಿಗೆ ಕುಟುಂಬಸ್ಥರ ಆಗ್ರಹಕ್ಕೆ ಮನ್ನಣೆ ನೀಡದೆ ನ್ಯಾಯ ವಿಳಂಬಾಗುವ ರೀತಿಯಲ್ಲಿ ಅಪರಾಧಿಗಳಿಗೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟ ಆಡಳಿತ ವ್ಯವಸ್ಥೆಯನ್ನು ನಾವು ಖಂಡಿಸೂತ್ತೇವೆ ಎಂದರಲ್ಲದೇ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಾ.ರತಿರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.