ಮಹಿಳೆ ಪ್ರಶ್ನಿಸಬೇಕಾದರೆ ಅವಳಿಗೆ ಶಿಕ್ಷಣ ನೀಡಬೇಕು-ಪ್ರೋ,ತೋಡ್ಕರ


ಧಾರವಾಡ ಜ.04–ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಕಠೋರವಾಗಿ ನಡೆಸಿಕೊಳ್ಳುತ್ತಾರೆ, ಇನ್ನು ಸಾವಿತ್ರಿಬಾವಿ ಫುಲೆಯ ಕಾಲದಲ್ಲಿ ಮಹಿಳೆಯರ ಬದುಕು ಹೇಗಿತ್ತು ಎಂಬುದು ಉಹಿಸಿಕೊಳ್ಳಲೂ ಸಾಧ್ಯವಿಲ್ಲದ ರೀತಿಯಲ್ಲಿ ಇತ್ತು. ಮಕ್ಕಳ ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿಗಮನ ಪದ್ಧತಿ ಇಂಥ ಅನಿಷ್ಟಗಳನ್ನು ಪ್ರಶ್ನಿಸಬೇಕೆಂದರೆ ಅವಳಲ್ಲಿ ಶಿಕ್ಷಣ ನೀಡಬೇಕು, ಅಷ್ಟೇ ಅಲ್ಲದೇ ಅವಳನ್ನು ಸ್ವಾವಲಂಬಿಯಾಗಿ ಮಾಡಬೇಕು ಅಂದಾಗಲೇ ಅವಳಲ್ಲಿ ಪ್ರ್ರಶ್ನಿಸುವ ಮನೋಧೋರನೆಯನ್ನು ಹುಟ್ಟುಹಾಕುತ್ತದೆ ಎಂದು ತಿಳಿದು ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳೆಯರಿಗೆ ಶಿಕ್ಷಣ ಕೊಡಲು ಶಾಲೆಗಳನ್ನು ತೆರೆದರು. ಎಂದು ಹೀರೇಮಲ್ಲೂರ್ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡ್ಕರ ಮಾತನಾಡಿದರು. ಅವರು ಚಿಲಿಪಿಲಿ ಸಂಸ್ಥೆಯು ಸಾವಿತ್ರಿಬಾಯಿ ಫುಲೆ ಶ್ರೇಷ್ಠ ಸೇವಾ ಶಿಕ್ಷಕ ಪ್ರಶಸ್ತಿಯನ್ನು ನವನಗರದಲ್ಲಿಯ ನಂದಿ ಬಡಾವಣೆಯಲ್ಲಿಯ ಬಸವ ಭವನದಲ್ಲಿ ಶ್ರೀಮತಿ ನಾಗರತ್ನಾ ಜಡೆದ ಯೋಜನಾ ಸಂಯೋಜಕಿ ಸ್ನೇಹ ಸಂಸ್ಥೆಯ ತೆರೆದ ತಂಗುದಾನ ಇವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ಹಣದೊಂದಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಅವರು ಮುಂದುವರೆದು ಮಾತನಾಡುತ್ತಾ ಈ ದೇಶದಲ್ಲಿ ಇಂದಿಗೂ ಪುರುಷತ್ವದ ನಾಯಕತ್ವವನ್ನು ಪೋಷಿಸಿಕೊಂಡು ಬರುತ್ತಿದ್ದೇವೆ ಅದಕ್ಕಾಗಿಯೇ ಈ ದೇಶದಲ್ಲಿ ಒಂಬತ್ತು ನಿಮಿಷಕ್ಕೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿರುವದು ತಲೆ ತಗ್ಗಿಸುವುಂತಹದ್ದು. ಮಹಿಳೆಯು ತಪ್ಪದೇ ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆಯನ್ನು ತಪ್ಪದೇ ಓದಿರಿ. ನಮಗೆ ಬಟ್ಟೆ, ಅನ್ನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಬೇಕಾಗಿದ್ದು, ಸಾವಿತ್ರಿಬಾಯಿ ಫುಲೆಯ ಜೀವನವನ್ನು ಅರ್ಥಮಾಡಿಕೊಂಡರೆ ಮಹಿಳೆ ಮೇಲಿನ ದೌರ್ಜನ್ಯಗಳು ನಿಲ್ಲಲು ಸಾಧ್ಯ. ಇಂದು ಮಹಿಳೆ ಎಲ್ಲ ರಂಗದಲ್ಲೂ ಮುಂದಿದ್ದಾಳೆ, ಹಾಗೆಯೇ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅರಿವಿನ ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತಾಗಲಿ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಅಂಗಳದ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗಾಗಿ ಅನುಭವಿಸಿದ ಅವಮಾನ, ನೋವುಗಳನ್ನು ನೋಡಿ ಸುಮ್ಮನಾಗಿದ್ದುಬಿಟ್ಟಿದ್ದರೆ ಇಂದಿಗೂ ದಮನಿತ ಮತ್ತು ದಲಿತ ಮಹಿಳೆಯರ ಬದುಕು ನರಕವಾಗಿಯೇ ಇರುತ್ತಿತ್ತು. ಆ ತಾಯಿಯ ಪರಿಶ್ರಮದಿಂದ ಇಂದು ಮಹಿಳೆ ಹೆಚ್ಚು ಹೆಚ್ಚು ಶಿಕ್ಷಣ ಪಡೆಯುವಂತಾಗಿದೆ. ಅಷ್ಟೇ ಅಲ್ಲ, ಎಲ್ಲ ರಂಗದಲ್ಲೂ ಮುಂದೆ ಬರುವಂತಾಗಿದೆ. ಇಂದು ಅವಳ ಜನ್ಮದಿನವೆಂದರೆ ಅದು ಈ ದೇಶದ ಎಲ್ಲ ಮಹಿಳೆಯರ ಜನ್ಮದಿನ ಎಂದು ಭಾವಿಸಿ ಸಂಭ್ರಮಿಸಬೇಕು ಮತ್ತು ನಮ್ಮೊಳಗೆ ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಸಿ. ಹಲಗತ್ತಿ, ಸಾಹಿತಿ ಪ್ರೊ. ಎಸ್.ಬಿ. ಪಟ್ಟಣಶೆಟ್ಟಿ, ಮಧುಮತಿ ನೀಲಿ, ಉಮಾ ಕುಂಬಾರ, ಮೂಗನೂರ ಉಪಸ್ಥಿತರಿದ್ದರು, ಚೇತನಾ ಹಲಗತ್ತಿ ಮತ್ತು ನಿಖಲ ಹಲಗತ್ತಿ ತಂಗುದಾನದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಮತ್ತು ಪುಸ್ತಕಗಳನ್ನು ವಿತರಿಸಿದರು.