ಮಹಿಳೆ ಕೊಂದು, ಸುಟ್ಟು ಪ್ರಿಯಕರ ಪರಾರಿ

ಬೆಂಗಳೂರು,ಏ.5- ಪ್ರಿಯಕರನೋರ್ವ ಮಹಿಳೆಯನ್ನು ಹತ್ಯೆಗೈದು ಬಳಿಕ ದೇಹವನ್ನು ಸುಟ್ಟು ಪರಾರಿಯಾಗಿರುವ ಘಟನೆ ಆನೇಕಲ್​​ ತಾಲೂಕಿನ ಸಂಪಿಗೆನಗರದಲ್ಲಿ ನಡೆದಿದೆ.
ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆಯನ್ನು ಮಂಜುಳಾ (32) ಎಂದು ಗುರುತಿಸಲಾಗಿದೆ. ನಾರಾಯಣ ಕೊಲೆಗೈದು ಪರಾರಿಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಪತಿಯಿಂದ ವಿಚ್ಛೇದನ ಪಡೆದಿದ್ದ ಮಂಜುಳಾ ಕಳೆದ ಹತ್ತು ವರ್ಷಗಳಿಂದ ನಾರಾಯಣನ ಜೊತೆ ವಾಸವಿದ್ದರು. ಅಪಾರ್ಟ್​ಮೆಂಟ್​ ಒಂದರಲ್ಲಿ ಮಂಜುಳಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಈ ನಡುವೆ ನಾರಾಯಣ ಪ್ರೇಯಸಿ ಮೇಲೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ತೆಗೆದು ಪೀಡಿಸುತ್ತಿದ್ದ. ಕೆಲಸ ತೊರೆಯುಂತೆಯೂ ಒತ್ತಡ ಹಾಕುತ್ತಿದ್ದನಂತೆ. ಆದರೆ ಮಂಜುಳಾ ಕೆಲಸ ತೊರೆಯುವುದಿಲ್ಲ ಎಂದು ಹಠ ಹಿಡಿದಿದ್ದು ನಾರಾಯಣ ಕುಪಿತಗೊಂಡಿದ್ದ.
ಕಳೆದ ಮಾರ್ಚ್​ 29 ರಂದು ಮಾತನಾಡುವ ನೆಪದಲ್ಲಿ ಮಂಜುಳಾರನ್ನು, ಇಬ್ಬರೂ ಯಾವಾಗಲೂ ಬರುತ್ತಿದ್ದ ಜಾಗಕ್ಕೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಕೊಲೆ ಮಾಡಿ ದೇಹವನ್ನು ಸುಟ್ಟು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮೃತ ಮಹಿಳೆಯ ತಲೆ ಬುರುಡೆ ಮತ್ತು ಬೆನ್ನು ಮೂಳೆ ಪತ್ತೆಯಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.