ಮಹಿಳೆ ಅಬಲೆಯಲ್ಲ ಸಬಲೆ:ನೀಲಗುಂದ

ನರೇಗಲ್ಲ,ನ.12: ಇಂದಿನ ದಿನಮಾನಗಳಲ್ಲಿ ತನ್ನನ್ನು ಎಲ್ಲ ರಂಗಗಳಲ್ಲಿಯೂ ಸಮರ್ಥವಾಗಿ ತೊಡಗಿಸಿಕೊಂಡಿರುವ ಮಹಿಳೆ ಎಂದಿಗೂ ಅಬಲೆಯಲ್ಲ ಸಬಲೆ. ಅವಳು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಎಂಬುದನ್ನು ತನ್ನ ಹಲವಾರು ಸಾಧನೆಗಳ ಮೂಲಕ ಜಗತ್ತಿಗೆ ತೋರಿಸಿದ್ದಾಳೆ. ನೀವೂ ಸಹ ಯಾವುದಕ್ಕೂ ಎದೆಗುಂದದೆ ಏನನ್ನಾದರೂ ಸಾಧಿಸಲು ಮುಂದಡಿ ಇಡಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಶಸ್ತಿ ಪುರಸ್ಕøತೆ ಮಂಗಳಾ ನೀಲಗುಂದ ಹೇಳಿದರು.
ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಹಿರೇಮಠದ ಸಭಾಭವನದಲ್ಲಿ
ಏರ್ಪಡಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಚಿಕ್ಕಪುಟ್ಟ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಮೊದಲು ವ್ಯಾಪಾರದ ಅನುಭವ ಪಡೆದುಕೊಳ್ಳಬೇಕು. ನಂತರ ಮಧ್ಯಮ ವರ್ಗದ ಉದ್ಯಮಗಳಲ್ಲಿ ತೊಡಗಿಸಿಕೊಂಡು ಅಲ್ಲಿನ ಲಾಭದಿಂದ ದೊಡ್ಡ ಉದ್ಯಮಗಳಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಪರಿಸರ ಸಂರಕ್ಷಣೆಯ ಕಡೆಗೆ ಗಮನ ನೀಡಿ, ಜನರನ್ನೂ ಜಾಗೃತಿಗೊಳಿಸಿ ಮತ್ತು ನಿಮ್ಮ ಮಕ್ಕಳಿಗೂ ಪರಿಸರ ಸಂರಕ್ಷಣೆಯ ಪಾಠವನ್ನು ಹೇಳಿಕೊಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ ಮಾತನಾಡಿ ಹೆಣ್ಣು ಸಂಸಾರದ ಕಣ್ಣು. ಅವಳಿಂದಲೆ ಸಂಸಾರದ ಬಂಡಿ ಸಾಗುತ್ತಿದೆ. ಪುರುಷರಿಗೆ ಸಮಾನವಾಗಿ ಅಲ್ಲದಿದ್ದರೂ ಅವರಿಗೆ ಸಹಾಯಕವಾಗುವಂತಾದರೂ ನಾವು ಆರ್ಥಿಕ ಬೆಂಬಲ ನೀಡಲು ಮುಂದಾಗಬೇಕು ಎಂದರು.
ಹಿರೇಮಠ ಓಣಿಯ ಮಹಿಳೆಯರು ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರಿಗೆ ತುಲಾಭಾರ ನೆರವೇರಿಸಿದರು. ನಂತರ ಶ್ರೀಗಳು ಆಶೀರ್ವಚನ ನೀಡಿದರು. ಷ.ಬ್ರ. ರಾಜಶೇಖರ ಸ್ವಾಮಿಗಳು ಪುರಾಣ ಪ್ರವಚನ ನೀಡಿದರು