ಮಹಿಳೆ ಅಬಲೆಯಲ್ಲ ಸಬಲೆ:ಜಯರಾಮಯ್ಯ

ಮಧುಗಿರಿ, ಏ. ೩- ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಎಲ್ಲ ಹಂತಗಳಲ್ಲೂ ಯಶಸ್ಸು ಸಾಧಿಸಿ ಅಬಲೆಯಲ್ಲ ಸಬಲೇ ಎನ್ನುವುದನ್ನು ಸಾಬೀತುಪಡಿಸಿ ಪುರುಷರಿಗೆ ಸಮಾನರಾಗಿದ್ದಾರೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ ಜಯರಾಮಯ್ಯತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲ ಸ್ಥಳಗಳಲ್ಲೂ ಮೇಲುಗೈ ಸಾಧಿಸಿದ್ದಾರೆ. ಈ ಅವಕಾಶಕ್ಕಾಗಿ ಬಹಳ ಹಿಂದಿನಿಂದಲೂ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಡಿಪಿಓ ಅನಿತಾ ಮಾತನಾಡಿ, ಸಮಾಜದಲ್ಲಿ ಸ್ತ್ರೀಗೆ ಸಮಾನವಾದ ಹಕ್ಕುಗಳನ್ನು ಸ್ಥಾನ ಮಾನಗಳನ್ನು ಕಾನೂನಾತ್ಮಕವಾಗಿ ಮೀಸಲಿಡಲಾಗಿದೆ. ಅವರು ಹಕ್ಕನ್ನು ಚಲಾಯಿಸಿ ಸಾರ್ವಜನಿಕವಾಗಿ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನಪಡಬೇಕು. ಈಗಲೂ ಕೆಲವೆಡೆ ಮಹಿಳಾ ಮೀಸಲಾತಿ ಸ್ಥಾನಗಳಲ್ಲಿ ಆಯ್ಕೆಯಾದರು ಅವರ ಪರವಾಗಿ ಗಂಡ ಅಥವಾ ಇತರರು ಅಧಿಕಾರ ಚಲಾಯಿಸುತ್ತಿರುವ ಬಗ್ಗೆ ಆರೋಪಗಳಿವೆ. ಇದಕ್ಕೆ ಅವಕಾಶ ಕೊಡದೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಆ ಸ್ಥಾನಕ್ಕೆ ನ್ಯಾಯ ದೊರಕಿಸುವ ರೀತಿ ಕರ್ತವ್ಯ ನಿರ್ವಹಿಸಬೇಕು ಆಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ರೋಟರಿ ಉಪರಾಜ್ಯಪಾಲೆ ಹಾಗೂ ಸಮಾಜ ಸೇವಕಿ ಲತಾ ನಾರಾಯಣ ಮಾತನಾಡಿ, ರೋಟರಿ ಇಂಟರ್ ನ್ಯಾಷನಲ್ ಚೇರ್ಮನ್ ಜೆನ್ನಿಫರ್ ಪ್ರಥಮ ಮಹಿಳಾ ಚೇರ್ಮನ್ ಆಗಿದ್ದು ಇಡೀ ಸ್ತ್ರೀ ಕುಲವೇ ಹೆಮ್ಮೆಪಡುವಂತಹದು. ಅಂತಹವರ ಸಾಧನೆಯನ್ನು ಸ್ಮರಿಸುತ್ತಾ ಕೇವಲ ಕುಟುಂಬ ನಿರ್ವಹಣೆಗೆ, ಮನೆಗೆ ಮಾತ್ರ ಸೀಮಿತರಾಗದೆ ಮಹಿಳೆಯರು ಸಮಾಜಕ್ಕೆ ತಮ್ಮದೇ ಆದಂತ ಹಕೊಡುಗೆ ನೀಡಿ ಇತರರಿಗೆ ಸ್ಪೂರ್ತಿ ಹಾಗೂ ಮಾದರಿಯಾಗಿ ಸಹಕಾರಿಯಾಗಬೇಕು ಎಂದರು.
ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಎಂಇ ಕರಿಯಣ್ಣ, ಎಂ. ವೆಂಕಟರಾಮು, ಮಾಜಿ ಅಧ್ಯಕ್ಷ ಎಂ ಶಿವಲಿಂಗಪ್ಪ, ಕಾರ್ಯದರ್ಶಿ ಸಿದ್ದಲಿಂಗಪ್ಪ, ಸಹ ಕಾರ್ಯದರ್ಶಿ ನಟರಾಜು, ಸದಸ್ಯರುಗಳಾದ ಚಿಕ್ಕರಂಗಪ್ಪ, ಆನಂದ್, ಶಿಕ್ಷಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ಪುಟ್ಟಮ್ಮ ಸುಜಾತಮ್ಮ, ಸಿಡಿಪಿಓ ಅನಿತಾ ಹಾಗೂ ಲತಾ ನಾರಾಯಣ್ ರವರನ್ನು ಸನ್ಮಾನಿಸಲಾಯಿತು.