ಮಹಿಳೆಯ ಸೊಂಟ ಹಿಡಿದು ಕಿರುಕುಳಪಿಎಸ್‌ಐ ಸಸ್ಪೆಂಡ್

ಬೆಂಗಳೂರು,ಏ.12-ದೂರು ನೀಡಲು ಠಾಣೆಗೆ ಬಂದ ಮಹಿಳೆಯ ಸೊಂಟ ಹಿಡಿದು ನಿತಂಬ ಮುಟ್ಟಿ ಕಿರುಕುಳ ನೀಡಿ ಅನುಚಿತ ವರ್ತನೆ ಆರೋಪ ಪ್ರ​ಕರಣ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಠಾಣೆಯ ಪಿಎಸ್‌ಐ ಮಂಜುನಾಥ್‌ ವಿರುದ್ಧ ಕೇಸ್ ದಾಖಲಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅನುಚಿತ ವರ್ತನೆ ಮಾಡಿದ್ದಾರೆಂದು ಏ.10ರಂದು ಮಹಿಳೆಯು ಟ್ವೀಟ್‌ ಮಾಡಿದ್ದರು. ಬಳಿಕ ಪಿಎಸ್‌ಐ ಮಂಜುನಾಥ್‌ ವಿರುದ್ಧ ದೂರು ಸಹ ನೀಡಿದ್ದರು. ಈ ಕುರಿತಾಗಿ ಮಾತನಾಡಿದ ಡಿಸಿಪಿ ಸಿ.ಕೆ.ಬಾಬಾ,  ನಮ್ಮ ಕಚೇರಿಯಿಂದ ಮಹಿಳೆಯನ್ನು ಸಂಪರ್ಕ ಮಾಡಿದ್ದೆವು. ಎಫ್‌ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕೆಂದು ಹೇಳಿದ್ದೆವು. ನಿನ್ನೆ ಸಂಜೆ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಹೇಳಿದರು.
ಐಪಿಸಿ ಸೆಕ್ಷನ್‌ 354ಎ, 354ಡಿ ರಡಿ ಎಫ್‌ಐಆರ್​ ದಾಖಲಿಸಿದ್ದು, ಪ್ರಕರಣದ ಬಗ್ಗೆ ಸತ್ಯಾಂಶ ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ವರದಕ್ಷಿಣೆ ಪ್ರಕರಣದಲ್ಲಿ ಹೇಳಿಕೆ ನೀಡಲು ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕೇಳಿಬಂದಿತ್ತು. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಸ್ವಾಮಿ ಅವರು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ವಾಟ್ಸಾಪ್ ಮೆಸೇಜ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಸರಣಿ ಟ್ವೀಟ್​ ಮೂಲಕ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ಟ್ಯಾಗ್ ಮಾಡಿ ಅಳಲುತೋಡಿಕೊಂಡಿದ್ದರು.