ಮಹಿಳೆಯ ಕೊರಳಲ್ಲಿದ್ದ ಸರ ಕಿತ್ತು ಪರಾರಿ

ಕನಕಪುರ,ಮೇ.೨೫- ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವುದು ಕನಕಪುರ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.
ನಗರದ ರಾಮನಗರ ರಸ್ತೆಯ ನಿವಾಸಿ ಸರೋಜಮ್ಮ ಮಾಂಗಲ್ಯ ಸರ ಕಳೆದುಕೊಂಡು ಮಹಿಳೆಯಾಗಿದ್ದಾರೆ. ಇವರು ವಿವೇಕಾನಂದ ನಗರದ ಒಂದನೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸರಗಳ್ಳತನ ಆಗಿದೆ.
ಸರೋಜಮ್ಮ ಅವರು ಮನೆಗೆ ಹಾಲು ತರಲು ಶುದ್ದ ಕುಡಿಯುವ ನೀರಿನ ಘಟಕದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ಖದೀಮರು ಮಹಿಳೆಯ ಕತ್ತಿನಲ್ಲಿದ್ದ ಸುಮಾರು ೬೦ ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಖದೀಮರು ಮಾಂಗಲ್ಯ ಸರಕಿತ್ತುಕೊಂಡಾಗ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರರೊಬ್ಬರು ಕಳ್ಳರನ್ನು ಹಿಡಿಯಲು ವೇಗವಾಗಿ ಹಿಂಬಾಲಿಸಿದರು ಪ್ರಯೋಜನವಾಗಿಲ್ಲ, ಕಳ್ಳರು ಅವರ ಕೈಗೆ ಸಿಗದೆ ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳದ ಬಳಿ ಇದ್ದ ಅಂಗಡಿಯೊಂದರಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಿದ್ದು ಅದರ ಸಹಾಯದಿಂದ ಸರಗಳ್ಳರನ್ನು ಶೀಘ್ರವಾಗಿ ಹಿಡಿದು ಸರ ಕಳೆದುಕೊಂಡ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಗಲಿನ ವೇಳೆಯಲ್ಲಿ ಸಿನಮೀಯ ರೀತಿಯಲ್ಲಿ ಸರಗಳ್ಳತನವಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ, ನಗರದಲ್ಲಿ ಈ ಹಿಂದೆ ಇದೇ ರೀತಿ ಎರಡು ಮೂರು ಪ್ರಕರಣಗಳು ನಡೆದಿವೆ, ಮತ್ತೆ ಅದೇ ರೀತಿಯಲ್ಲಿ ಘಟನೆ ನಡೆದಿರುವುದು ನಾಗರೀಕರಲ್ಲಿ ಆತಂಕ ಸೃಷ್ಠಿಸಿದೆ. ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.