ತಿರುವನಂತಪುರ,ಜೂ.೬- ಮಹಿಳೆಯ ಅರೆ ನಗ್ನ ದೇಹವನ್ನು ಯಾವಾಗಲೂ ಲೈಂಗಿಕ ಅಥವಾ ಅಶ್ಲೀಲವಾಗಿ ನೋಡಬಾರದು. ಮಕ್ಕಳಿಗೆ ತಮ್ಮದೇ ದೇಹವನ್ನು ಕ್ಯಾನ್ವಾಸ್ ಆಗಿ ಚಿತ್ರಕಲೆಗೆ ಬಳಸಲು ಅವಕಾಶ ನೀಡಿದರೆ ತಪ್ಪಾಗಲಾರದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅರೆನಗ್ನ ದೇಹದ ಮೇಲೆ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೋ ಮಾಡಿದ ಮಹಿಳೆಯೊಬ್ಬರು ಕ್ರಿಮಿನಲ್ ಕೇಸ್ ನಿಂದ ಖುಲಾಸೆಯಾಗಿದ್ದಾರೆ.
ತಾಯಿಯ ವಿವರಣೆಯನ್ನು ಎತ್ತಿ ಹಿಡಿದ ಕೋರ್ಟ್, ವಿಡಿಯೋ ಅಶ್ಲೀಲವಲ್ಲ ಎಂದು ತೀರ್ಪು ನೀಡಿದೆ.
ಲೈಂಗಿಕವಾಗಿ ಹತಾಶೆಗೊಂಡಾಗ ನಿಯಂತ್ರಿಸಲು ಬಯಸುವ ಸಮಾಜಕ್ಕೆ ತಿಳುವಳಿಕೆ ನೀಡುವ ಸಲುವಾಗಿ ನಗ್ನ ಎದೆ ಮೇಲೆ ಚಿತ್ರ ಬಿಡಿಸಿಕೊಂಡಿದ್ದಾರೆ. ತನ್ನ ತಾಯಿಯ ನಗ್ನ ದೇಹ ನೋಡಿ ಬೆಳೆದ ಮಗ ಅಥವಾ ಮಗು ಭವಿಷ್ಯದಲ್ಲಿ ಮತ್ತೊಬ್ಬ ಸ್ತ್ರೀ ದೇಹವನ್ನು ಲೈಂಗಿಕಾಸಕ್ತಿಯಿಂದ ನೋಡುವುದಿಲ್ಲ ಎಂಬ ಸಂದೇಶ ವಿಡಿಯೊದಲ್ಲಿದೆ. ಇದೇ ಅಂಶವನ್ನು ಪರಿಗಣಿಸಿದ ಕೋರ್ಟ್, ನಗ್ನ ದೇಹವನ್ನು ಲೈಂಗಿಕ ದೃಷ್ಟಿಯಲ್ಲಿ ನೋಡದೇ ಸಂವೇದನಾಶೀಲತೆ ಬೆಳೆಸುವ ಉದ್ದೇಶದಿಂದ ಮಕ್ಕಳಿಗೆ ಕ್ಯಾನ್ವಾಸ್ ರೀತಿಯಲ್ಲಿ ನಗ್ನ ಎದೆ ತೆರೆದಿಟ್ಟಿರುವುದು ತಪ್ಪಲ್ಲಎಂದು ಕೋರ್ಟ್ ಹೇಳಿದೆ.
ದೇವಾಲಯದ ಉದಾಹರಣೆ:
ಪ್ರಾಚೀನ ದೇವಾಲಯಗಳಲ್ಲಿ ನಗ್ನ ಸ್ಥಿತಿಯಲ್ಲಿ ದೇವತಾ ಮೂರ್ತಿಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಲಭ್ಯವಿರುವ ನಗ್ನ ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ಕಲೆ ಎಂದು ಪರಿಗಣಿಸಲಾಗಿದೆ.ಎಲ್ಲಾ ದೇವತೆಗಳ ವಿಗ್ರಹಗಳು ಬರಿ ಎದೆಯಲ್ಲಿದ್ದರೂ ಭಕ್ತಿ ಭಾವದಿಂದ ದೇವರನ್ನು ಪ್ರಾರ್ಥಿಸುತ್ತಾರೆಯೇ ಹೊರತು ಲೈಂಗಿಕ ದೃಷ್ಟಿಕೋನದಲ್ಲಿ ನೋಡುವುದಿಲ್ಲವಲ್ಲ ಎಂಬ ಅಂಶವನ್ನು ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಉಲ್ಲೇಖ ಮಾಡಿದ್ದಾರೆ.
ತಾಯಿಯ ದೇಹದ ಮೇಲೆ ಮಕ್ಕಳ ರೇಖಾಚಿತ್ರವನ್ನು ವಾಸ್ತವಿಕ ಅಥವಾ ಅನುಕರಣೀಯ ಲೈಂಗಿಕ ಚಟುವಟಿಕೆ ಎಂದು ನಿರೂಪಿಸಲಾಗುವುದಿಲ್ಲ, ಲೈಂಗಿಕ ತೃಪ್ತಿಯ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿಲ್ಲ. ವಿಡಿಯೋದಲ್ಲಿ ಲೈಂಗಿಕತೆಯ ಸುಳಿವು ಇಲ್ಲ. ಮಹಿಳೆಯರ ದೇಹದ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಅಭಿಪ್ರಾಯ ಮೂಡಿಸುವುದು ಈ ವಿಡಿಯೋದ ಉದ್ದೇಶವಾಗಿತ್ತು. ವಿಡಿಯೊದಲ್ಲಿ ನೀಡಿರುವ ಹೇಳಿಕೆಯಲ್ಲಿಯೂ ಇದನ್ನೇ ಹೇಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.