ಮಹಿಳೆಯು ಕುಟುಂಬದ ಕಣ್ಣು: ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ


ಬಳ್ಳಾರಿ,ಮಾ.7: ಮಹಿಳೆಯು ಕುಟುಂಬದ ಕಣ್ಣಿನ ಹಾಗೆ, ಮಹಿಳೆಯು ಆರೋಗ್ಯವಾಗಿದ್ದರೆ ಕುಟುಂಬ ಸಂತೃಪ್ತಿಯಿಂದ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಸಾಂಕ್ರಾಮಿಕ ಘಟಕ, ಬಳ್ಳಾರಿ ಸೈಕಲ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಸೈಕಲ್ ಜಾಥಾಗೆ
ಹಸಿರು ನಿಶಾನೆ ತೋರಿಸುವುದರ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.
ಕುಟುಂಬದ ಸದಸ್ಯರೊಂದಿಗೆ ತಾವು ಸಹ ಸರಿಯಾದ ಸಮಯಕ್ಕೆ ಆಹಾರ ಸೇವಿಸುವ ಮೂಲಕ ಸಮುದಾಯ ಆರೋಗ್ಯದ ರಕ್ಷಣೆಗೆ ಬೆಂಬಲ ನೀಡುವ ಕಾರ್ಯವನ್ನು ಮಾಡಬೇಕಿದೆ ಎಂದರು.
ನಿಯಮಿತವಾಗಿ ಆರೋಗ್ಯ ತಪಾಸಣೆ, ಮಧ್ಯ, ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರುವುದು ದೈನಂದಿನ ಕಾರ್ಯಗಳ ಜೊತೆಗೆ ವ್ಯಾಯಾಮ-ಯೋಗವನ್ನು ರೂಡಿ ಮಾಡಿಕೊಳ್ಳಲು ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಮಹಿಳಾ ಸಂಘದ ಅದ್ಯಕ್ಷೆ ಡಾ.ರೇಣುಕಾ ಮಂಜನಾಥ ಮಾತನಾಡಿ, ಮದುವೆ ನಂತರದಲ್ಲಿ ಕುಟುಂಬದ ಸಂಪೂರ್ಣ ಆರೈಕೆಗೆ ತೊಡಗುವ ಮಹಿಳೆಯ ಆರೋಗ್ಯದ ಜವಾಬ್ಧಾರಿ ಕುಟುಂಬದ ಇತರ ಸದಸ್ಯರದು ಸಹ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಕನಿಷ್ಟ 30 ನಿಮಿಷಗಳ ವ್ಯಾಯಾಮವನ್ನು ಎಲ್ಲರೂ ಮಾಡಲು ಸಮಯ ಮಿಸಲು ಇಡಬೇಕು. ಸಾಧ್ಯವಾದರೆ ಸೈಕಲ್ ಬಳಕೆ ಪರಿಣಾಮಕಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೆಂದ್ರ ಕುಮಾರ, ಐಎಮ್ ಮಹಿಳಾ ಘಟಕ ಹಾಗೂ ಐಎಮ್ ಅಧ್ಯಕ್ಷ ಡಾ.ರೇಣುಕಾ ಮಂಜುನಾಥ, ಬಳ್ಳಾರಿ ಸೈಕಲ್ ಕ್ಲಬ್ ಅಧ್ಯಕ್ಷ ಡಾ.ಬಿ.ಕೆ.ಸುಂದರ್, ಡಾ.ರವಿಶಂಕರ, ಡಾ.ಸೋಮನಾಥ, ಡಾ.ಚಂದ್ರಶೇಖರ, ಡಾ.ದಿನೇಶ ಗುಡಿ, ಡಾ.ಸಂಗೀತಾ ಕಟ್ಟಿ, ಡಾ.ಕಲ್ಪನಾ, ಐಎಮ್ ಸಖಿ ಸಮೂಹದ ಸದಸ್ಯರು, ಬಿಸಿಸಿ ಕಾರ್ಯದರ್ಶಿ ಪ್ರಶಾಂತ ಹಾಗೂ ಸದಸ್ಯರು ಹಾಗೂ ಜಿಲ್ಲಾ ಎನ್ಸಿಡಿ ಕನ್ಸಲ್ಟೆಂಟ್ ಡಾ.ಜಬೀನಾ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
ಸೈಕಲ್ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ಸಂಗಮ ಸರ್ಕಲ್ ನಿಂದ ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಸುಧಾ ಸರ್ಕಲ್ ನಿಂದ ಎಸ್.ಪಿ ಸರ್ಕಲ್ ಮಾರ್ಗವಾಗಿ ದುರುಗಮ್ಮ ದೇವಸ್ಥಾನದಿಂದ ರಾಯಲ್ ಸರ್ಕಲ್ ಮೂಲಕ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಜಾಥಾದಲ್ಲಿ ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ ಎಂಬ ಮಾಹಿತಿ ಫಲಕಗಳು ಕಂಡುಬಂದವು.