ಮಹಿಳೆಯರ ಹಿಂಭಾಗ ಮುಟ್ಟಿ ಪರಾರಿಯಾಗುತ್ತಿದ್ದ ಸೈಕೋ ಸೆರೆ

ಬೆಂಗಳೂರು,ಜೂ.4- ಡೆಲಿವರಿ ಬಾಯ್ ಸೋಗಿನಲ್ಲಿ ರಾತ್ರಿ ವೇಳೆ ಬೈಕ್​ನಲ್ಲಿ ಸುತ್ತಾಡುತ್ತಾ ಮಹಿಳೆಯರ ಹಿಂಭಾಗ ಮುಟ್ಟಿ ವಿಕೃತ ಆನಂದ ಪಡೆಯುತ್ತಿದ್ದ ಸೈಕೋ​​ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್​​ನ ರಾರ್ಬಟ್​​ಸನ್ ಪೇಟೆಯ ಸೈಕೋಪಾತ್ ಅರುಣ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ.ಕಳೆದ‌ ಮೂರು ತಿಂಗಳ ಹಿಂದೆ ಕೋರಮಂಗಲದ ಮೇಸ್ತ್ರಿ ಪಾಳ್ಯದಲ್ಲಿ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದ ಆರೋಪಿಯ ಸಹೋದರ ಕೆವಿನ್ ಡೊಂಜೊ‌ ಕಂಪೆನಿಯಲ್ಲಿ ಡೆಲಿವರಿ ಬಾಯ್ ಆಗಿದ್ದ.
ಲಾಕ್​​ಡೌನ್ ಹಿನ್ನೆಲೆಯಲ್ಲಿ ಆರ್ಡರ್​​ಗಳು‌ ಹೆಚ್ಚಾಗಿದ್ದರಿಂದ ಬೆಳಗ್ಗೆ ಸಮಯದಲ್ಲಿ ಕೆವಿನ್ ಡೆಲಿವರಿ ಮಾಡಿದರೆ, ಮಧ್ಯಾಹ್ನ‌ ನಂತರ ತಮ್ಮ ಅರುಣ್ ಕೆಲಸ ಮಾಡುತ್ತಿದ್ದ. ಒಂದೇ ಐಡಿ ಕಾರ್ಡ್ ನಲ್ಲಿ ಇಬ್ಬರು ಪುಡ್ ಡೆಲಿವರಿ ಮಾಡುತ್ತಿದ್ದರು.
ಕಳೆದ ಮೇ 31ರ ರಾತ್ರಿ ಕೋರಮಂಗಲ 4ನೇ ಹಂತದಲ್ಲಿ ಡೆಲಿವರಿಗೆ ಎಂದು ಹೋಗಿದ್ದಾಗ, ನಡೆದುಕೊಂಡು ಹೋಗುತ್ತಿದ್ದ ಉತ್ತರ ಭಾರತ ಮೂಲದ ಯುವತಿಯನ್ನು ಗುರಿಯಾಗಿಸಿಕೊಂಡು ಆಕೆಯ ಹಿಂಭಾಗಕ್ಕೆ ಹೊಡೆದು ಪರಾರಿಯಾಗಿದ್ದ. ನಂತರ ಯುವತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಳು. ಕೃತ್ಯ ನಡೆದ ಸ್ಥಳ ಆಧರಿಸಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು‌ ಹಸ್ತಾಂತರವಾಗಿತ್ತು.
ವಿಕೃತಕಾಮಿ ಬಂಧನ
ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೃತ್ಯ ನಡೆದ‌ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡು ನೋಡಿದಾಗ ಅಸಭ್ಯ ವರ್ತನೆ ತೋರಿರುವುದು ಸ್ಪಷ್ಟವಾಗಿತ್ತು‌. ಮಡಿವಾಳ ಎಸಿಪಿ ಸುಧೀರ್ ಹೆಗ್ಡೆ ನೀಡಿದ ಸೂಚನೆ ಮೇರೆಗೆ ಪಿಎಸ್ಐ ಪುಟ್ಟಸ್ವಾಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದೆ‌.
80 ಬೈಕ್ ಗಳ‌ ತಲಾಶ್:
ಆರೋಪಿ ಪತ್ತೆಗಾಗಿ ಸುಮಾರು 40ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿದಾಗ, ಆರೋಪಿ ಡೋಂಜ್ ಕಂಪೆನಿಯ ಡೆಲಿವರಿ ಬಾಯ್ ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬೈಕ್‌ ಹಾಗೂ ಆತನ ಮುಖ ಚಹರೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ತಾಂತ್ರಿಕ ತನಿಖೆ ನಡೆಸಿ‌ದಾಗ ಆರೋಪಿ ಬಳಸುತ್ತಿದ್ದದ್ದು, ಹೋಂಡಾ ಡಿಯೊ ಬೈಕ್ ಎಂದು ಪತ್ತೆ ಹಚ್ಚಿದ್ದರು.‌ ಇನ್ನೊಂದೆಡೆ ಘಟನೆ ನಡೆದ ಆಸುಪಾಸಿನಲ್ಲಿ ಡೆಲಿವರಿಗೆ ಓಡಾಡಿದ ಬೈಕ್ ಗಳ ಮಾಹಿತಿಯನ್ನು ಡೋಂಜ್ ಕಂಪೆನಿಯಿಂದ‌ ಪಡೆದಿದ್ದರು.
80 ಬೈಕ್ ಗಳು ಕೃತ್ಯ ನಡೆದ ದಿನದ ರಾತ್ರಿ ಓಡಾಡಿವೆ ಎಂದು ಮಾಹಿತಿ ನೀಡಿತ್ತು. ಪೂರ್ಣವಾಗಿ ಪರಿಶೀಲಿಸಿದಾಗ ಆರೋಪಿಯ ಅಣ್ಣನ್ನು ಬಳಸುತ್ತಿದ್ದ ಬೈಕ್‌ ಪತ್ತೆ ಹಚ್ಚಿದ್ದಾರೆ. ಬೈಕ್ ಮಾಲೀಕ ಕೆವಿನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಡಿಯೋ ತೋರಿಸಿದಾಗ ಸಹೋದರ ಕೃತ್ಯ ಎಸಗಿದ್ದಾನೆ ಎಂದು ಮಾಹಿತಿ ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಬೈಕ್​​ನ ಮಿರರ್ ಸುಳಿವು:
ದೌರ್ಜನ್ಯದ ಸಿಸಿಟಿವಿ ವಿಡಿಯೋ ಅಸ್ಪಷ್ಟವಾಗಿದ್ದು, ಬೈಕ್ ನೋಂದಣಿ ಸಂಖ್ಯೆ ಸರಿಯಾಗಿ ಗೋಚರಿಸುತ್ತಿರಲಿಲ್ಲ. ಇದು ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಕಷ್ಟಸಾಧ್ಯವಾಗಿತ್ತು. ಡೊಂಜೊ ಕಂಪೆನಿಯು ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸುವಾಗ ಎಲ್ಲಾ ಡಿಯೊ ಬೈಕ್​ಗಳ ಮಿರರ್ ಹಾಗೂ ಮೊಬೈಲ್‌ ಸ್ಟ್ಯಾಂಡ್ ಎಡಭಾಗದಲ್ಲಿದ್ದರೆ, ಆರೋಪಿಯ ಬೈಕ್​ನಲ್ಲಿ ಎಲ್ಲವೂ ಬಲಭಾಗದಲ್ಲಿತ್ತು. ಇದನ್ನು ಕಂಡು ಅನುಮಾನ ವ್ಯಕ್ತಪಡಿಸಿದ ಪೊಲೀಸರು ದೌರ್ಜನ್ಯ ವಿಡಿಯೋದಲ್ಲಿ ಇರುವ ಬೈಕ್ ಹಾಗೂ ಪತ್ತೆ ಹಚ್ಚಿದ ಬೈಕ್ ತಾಳೆಯಾಗುತಿತ್ತು.‌ ಅನುಮಾನದ ಮೇರೆಗೆ ಡೆಲಿವರಿ ಬಾಯ್ ಕೆವಿನ್ ನನ್ನು ವಶಕ್ಕೆ‌ ಪಡೆದುಕೊಂಡಾಗ ಈತನ ತಮ್ಮ ಆರೋಪಿ ಅರುಣ್‌ ಸಿಕ್ಕಿಹಾಕಿಕೊಂಡಿದ್ದಾನೆ.
ಸೈಕೋನಂತಿರುವ ಆರೋಪಿ ಅರುಣ್ ಕಳೆದ ಒಂದು ತಿಂಗಳಲ್ಲಿ‌ ಮೂರು-ನಾಲ್ಕು ಯುವತಿಯರಿಗೆ ಇಂತಹ ನೀಚ ಕೃತ್ಯ ಎಸಗಿರುವುದು ಗೊತ್ತಾಗಿದೆ. ಮಹಿಳೆಯರ ಹಿಂಭಾಗಕ್ಕೆ‌ ಮುಟ್ಟಿದರೆ ಮಾನಸಿಕವಾಗಿ ಸುಖಪಡೆಯುತ್ತಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಘಟನೆ ನಡೆದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿರುವ ಬಗ್ಗೆ ಯುವತಿ, ನಗರ ಪೊಲೀಸರ ಉತ್ತಮ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ‌.