ಮಹಿಳೆಯರ ಹಕ್ಕುಗಳ ಬಗ್ಗೆ ಹೋರಾಡುವೆ


ಸಂಜೆವಾಣಿ ವಾರ್ತೆ
ಸಂಜೆವಾಣಿ ವಾರ್ತೆ
ಕೊಟ್ಟೂರು, ಎ.01 ನನಗೆ ಇಂಗ್ಲೀಷ ಮತ್ತು ಹಿಂದಿ ಭಾಷೆಯಲ್ಲಿಯೂ ಪ್ರಭುತ್ವವಿದೆ. ನನ್ನ ಗೆಲವು ನಿಶ್ಚಿತವಾಗಿದ್ದು ಲೋಕಸಭೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ರಾಜ್ಯದ ಸಮಸ್ಯೆಗಳ ಬಗ್ಗೆ ಮತ್ತು ಹಕ್ಕುಗಳ ಕುರಿತು ಧ್ವನಿ ಎತ್ತುವೆ, ಪ್ರಶ್ನೆಮಾಡುವೆ ಎಂದು ದಾವಣಗೆರೆ ಲೋಕಸಭೆಯ ಕಾಂಗ್ರೇಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.
 ತಾಲೂಕಿನ ಉಜ್ಜಿನಿಯಲ್ಲಿ ಶನಿವಾರ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ದಾವಣಗೆರೆಗೆ ತೆರಳುವ ಮುನ್ನ ಪತ್ರಿಕೆಯೊಂದಿಗೆ ಕೊಟ್ಟೂರಿನಲ್ಲಿ ಮಾತನಾಡಿದ ಅವರು, ನಾನು ವೈದ್ಯೆಯಾಗಿರುವುದರಿಂದ ಮಹಿಳೆಯರ ಸಮಸ್ಯೆಗಳ ಕುರಿತು ನನಗೆ ಅರಿವಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಡಯಲಿಸೀಸ್ ಕೇಂದ್ರವನ್ನು ಸ್ಥಾಪಿಸಲು ಹೋರಾಟಮಾಡಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಮುಖ್ಯವಾಗಿ ಮಹಿಳಾ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳ ಕೈ ಹಿಡಿಯುವುದರಲ್ಲಿ ಎರಡು ಮಾತಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದರು.
ಕೆರೆಗೆ ನೀರು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಆದ್ದರಿಂದ ಕೇಂದ್ರದಲ್ಲಿ ಈ ಸಾರಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣೆ ಹಿಡಿಯುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಲೋಕಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧಿಸಲು ಕಾಂಗ್ರೇಸ್ ಅವಕಾಶ ಕಲ್ಪಿಸಿದೆ. ಇದು ಮಹಿಳೆಯರ ಮೇಲೆ ಕಾಂಗ್ರೇಸ್ ಪಕ್ಷಕ್ಕಿರುವ ಗೌರವವನ್ನು ತೋರಿಸುತ್ತದೆ. ಆದ್ದರಿಂದ ಮಹಿಳಾ ಮತದಾರರು ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಹೆಚ್ಚಿನ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ, ರಾಜ್ಯ ಭೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್. ಶಾಂತನಹಳ್ಳಿ ಕೊಡದಪ್ಪ, ತಾಪಂ ಮಾಜಿ ಸದಸ್ಯ ಕಡ್ಡಿ ಬಸಣ್ಣ ಮುಂತಾದವರಿದ್ದರು.