ಮಹಿಳೆಯರ ಸ್ವಾವಲಂಬಿ ಜೀವನ ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುವು

ಕಾಗವಾಡ :ಮಾ.16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಸ್ಥಳದ ಬೆಳ್ತಂಗಡಿ ತಾಲೂಕಿನಲ್ಲಿ ಬೆರಳೆಣಿಕೆಯ ಸದಸ್ಯರನ್ನೊಳಗೊಂಡು ಪ್ರಾರಂಭವಾಗಿ ಇಂದು ರಾಜ್ಯಾದ್ಯಂತ ಕೋಟ್ಯಾಂತರ ಮಹಿಳೆಯರ ಸ್ವಾವಲಂಬಿ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿದೆ. ಅದರಲ್ಲಿಯೂ ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವಲಯ ನಿರ್ದೇಶಕ ದುಗ್ಗೇಗೌಡಾ ಹೇಳಿದರು.
ಅವರು ಬುಧವಾರ ದಿ. 15 ರಂದು ಕಾಗವಾಡ ಪಟ್ಟಣದ ವಿದ್ಯಾಸಾಗರ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2022-23 ನೇ ಸಾಲಿನ ಸಾಧನಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ಪೂಜ್ಯರ ಮಾರ್ಗದರ್ಶನದಂತೆ 2022-23 ಸಾಲಿನಲ್ಲಿ ಅಥಣಿ ಯೋಜನಾ ಕಚೇರಿ ವಿಂಗಡಣೆಯಾಗಿ ನೂತನವಾಗಿ ಕಾಗವಾಡ ತಾಲೂಕಾ ಯೋಜನಾ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಅನಂತಪೂರ, ಮದಭಾವಿ, ಐನಾಪೂರ, ಉಗಾರ, ಶಿರಗುಪ್ಪಿ, ಕಾಗವಾಡ ಪ್ರದೇಶಗಳನ್ನು ಒಳಗೊಂಡಿದೆ. ಕ್ಷೇತ್ರವ್ಯಾಪ್ತಿ ಕಾಗವಾಡ ವಿಧಾನಸಭಾ ಮತಕ್ಷೇತ್ರವಾಗಿರುತ್ತದೆ. ಸದರಿ ತಾಲೂಕಿನಲ್ಲಿ ಒಟ್ಟು 2070 ತಂಡಗಳು ರಚನೆಯಾಗಿದ್ದು, 17980 ಸದಸ್ಯರನ್ನು ಒಳಗೊಂಡಿರುತ್ತದೆ. ಪ್ರಸ್ತುತ ವರ್ಷದಲ್ಲಿ ಒಟ್ಟು 50 ಕೋಟಿ ಪ್ರಗತಿ ನಿಧಿ ವಿತರಣೆಯಾಗಿದ್ದು, ಕೃಷಿ 10.95 ಕೋಟಿ, ಹೈನುಗಾರಿಕೆ 9.63 ಕೋಟಿ, ಸ್ವ ಉದ್ಯೋಗ 8.56 ಕೋಟಿ, ವ್ಯಾಪಾರ 7.47 ಕೋಟಿ, ಶಿಕ್ಷ 8.30 ಕೋಟಿ, ಇತರೆ 5.09 ಕೋಟಿ ಸದರಿ ಮೊತ್ತವನ್ನು ಸದಸ್ಯರು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ವಿನಿಯೋಗ ಮಾಡಿರುತ್ತಾರೆ ಎಂದು ಹೇಳಿದರು.
ಅದರಂತೆ ಸಸಿ ನಾಟಿ 0.78 ಲಕ್ಷ, ಹೈನುಗಾರಿಕೆ 0.53 ಲಕ್ಷ, ಕೃಷಿ ಯಂತ್ರೋಪಕರಣ ಖರೀದಿ 0.20 ಲಕ್ಷ, ಒಟ್ಟು 151.01 ಲಕ್ಷ ರೂ. ವಿತರಣೆ ಅನುದಾನವನ್ನು ನೀಡಲಾಗಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 25 ಲಕ್ಷ ರೂ. ಅನುದಾನ ವಿತರಣೆ ಮಾಡಲಾಗಿದ್ದು ಇದನ್ನು ದೇವಸ್ಥಾನ ಜೀರ್ಣೋದ್ಧಾರ, ಜೈನ ಬಸದಿ ಅಭಿವೃದ್ಧಿ, ಸಭಾ ಭವನ ಮುಂತಾದ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಅದರಂತೆ ನಮ್ಮೂರು ನಮ್ಮ ಕೆರೆ, ವಿದ್ಯಾರ್ಥಿಗಳಿಗೆ ವಾರ್ಷಿಕ ಸುಜ್ಞಾನ ನಿಧಿ, ನಿರ್ಗತಿಕರ ಮಾಶಾಸನದ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸ್ವಪ್ನಿಲ ಪಾಟೀಲ, ನಾಥಗೌಡ ಪಾಟೀಲ, ಜ್ಯೋತಿ ಪಾಟೀಲ, ಚಿದಾನಂದ ಮಾಳಿ, ಪದ್ಮಾಕರ ಕರವ, ರಮೇಶ ಚೌಗಲಾ, ಶ್ರೀದೇವಿ ಚೌಗಲಾ, ಜಿಲ್ಲಾ ನಿರ್ದೆಶಕರಾದ ನಾಗರತ್ನ ಹೆಗ್ಗಡೆ, ಮುಖ್ಯಾಧ್ಯಾಪಕ ಜಮಖಂಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಕಾಗವಾಡ ವಲಯ ಮೇಲ್ವಿಚಾರಕರಾದ ದೀಪಾ ಯಲ್ಲಾಪೂರ, ಕೃಷಿ ಮೇಲ್ವಿಚಾರಕರಾದ ಶಿವಪ್ಪ ಶಿಪರಮಟ್ಟಿ, ಕಾಗವಾಡ ವಲಯ ಸೇವಾ ಪ್ರತಿನಿಧಿಗಳಾದ ಸುರೇಖಾ ಬಾಡಗೆ, ಶೈಲಜಾ ಖೋತ, ಸಲ್ಮಾ ಕಾಳೆ, ರೇಣುಕಾ ಮಸ್ಕಿ, ಸಂಧ್ಯಾ ಮಾಕಣ್ಣವರ, ಅಶ್ವಿನಿ ಕೋಳಿ, ಸುಧಾ ನಾಯಿಕ, ಭಾಗ್ಯಶ್ರೀ ಬಡಿಗೇರ, ಸುಜಾತಾ ನಾಗರಾಳೆ ಸೇರಿದಂತೆ ಅನೇಕರು ಇದ್ದರು.