ಮಹಿಳೆಯರ ಸುರಕ್ಷತೆಗೆ ಸರ್ಕಾರ ಬದ್ಧ- ಬಿಎಸ್‌ವೈ

ಬೆಂಗಳೂರು, ನ. ೧೧- ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಬದುಕುವಂತಹ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮಹಿಳೆಯರ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ ಎಂದರು.
ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಒತ್ತು ನೀಡಿದೆ. ಮಹಿಳೆಯರ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಜತೆಗೆ ದೇಶದಲ್ಲೇ ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ರಾಜ್ಯವನ್ನು ಅಗ್ರಮಾನ್ಯವಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ವಿಧಾನಸೌಧದ ಮುಂಭಾಗದಲ್ಲಿಂದು ನಿರ್ಭಯ ನಿಧಿಯಡಿ ರಾಜ್ಯದ ಪೊಲೀಸ್ ಇಲಾಖೆಯ ಮಾನವ ಕಳ್ಳಸಾಗಾಣೆ ನಿಷೇಧ ದಳಕ್ಕೆ ೭೫೧ ದ್ವಿಚಕ್ರ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಒಂದು ಸಮಾಜದ ಪ್ರಗತಿಶೀಲತೆಯನ್ನು ಆ ಸಮಾಜದಲ್ಲಿ ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯುತ್ತೇನೆ ಎಂದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಅದರಂತೆ ಮಹಿಳೆಯರು ನಿರ್ಭಿತಿಯಿಂದ ಇರುವಂತಹ ವಾತಾವರಣ ಸೃಷ್ಟಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯದಲ್ಲಿ ಮಹಿಳೆಯ ಸುರಕ್ಷತೆಗಾಗಿಯೇ ಎಲ್ಲ ೭೫೦ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿಯನ್ನು ಆರಂಭಿಸಲಾಗುತ್ತಿದೆ ಎಂದರು.
ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಮಹಿಳಾ ಸುರಕ್ಷತಾ ಉಪಕರಣಗಳ ಅಳವಡಿಕೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾ ಣ ಇಲಾಖೆ ವತಿಯಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು, ಸಹಾಯವಾಣಿ, ಗಸ್ತುವಾಹನ ಒದಗಿಸುವ ಜತೆಗೆ ಲಿಂಗಸಂವೇದಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಇವೆಲ್ಲವನ್ನೂ ಕೇಂದ್ರ ಸರ್ಕಾರ ಒದಗಿಸಿರುವ ನಿರ್ಭಯ ನಿಧಿಯಡಿ ಮಾಡಲಾಗುತ್ತಿದೆ. ಹಾಗೆಯೇ ಕೇಂದ್ರ ಸರ್ಕಾರ ರಾಜ್ಯದ ೭೦೦ಪೊಲೀಸ್ ಠಾಣೆಗಳಲ್ಲಿ ಮಹಿಳಾ ನೆರವು ಸಹಾಯವಾಣಿಯನ್ನು ಆರಂಭಿಸಲು ೭ ಕೋಟಿ ರೂ. ಒದಗಿಸಿದೆ ಎಂದು ಅವರು ಹೇಳಿ, ಅದರಂತೆ ಎಲ್ಲ ಠಾಣೆಗಳಲ್ಲೂ ಸಹಾಯವಾಣಿ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಿರ್ಭಯ ಯೋಜನೆಯಡಿ ರೂಪಿಸಿರುವ ಸೇಫ್ ಸಿಟಿ ಯೋಜನೆಯಂತೆ ಬೆಂಗಳೂರು ನಗರದಲ್ಲೂ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ನಿರ್ಭಯ ನಿಧಿಯಡಿ ಒದಗಿಸಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕಿದೆ ಎಂದು ಅವರು ಹೇಳಿದರು.
ಇದೆಲ್ಲಕ್ಕಿಂತ ಮಿಗಿಲಾಗಿ ಮಹಿಳೆಯರ ದೃಷ್ಟಿಕೋನ ಬದಲಾಗಬೇಕಿದೆ. ಇದಕ್ಕೆಲ್ಲಾ ನಾವೆಲ್ಲಾ ಒಟ್ಟಾಗಿ ಸೇರಿ ಶ್ರಮಿಸೋಣ. ಮಹಿಳೆಯರ ಸುರಕ್ಷಿತಾ ದೃಷ್ಟಿಯಿಂದ ರಾಜ್ಯವನ್ನು ಅಗ್ರಮಾನ್ಯ ರಾಜ್ಯವ್ನಾಗಿಸೋಣ ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾನವ ಕಳ್ಳಸಾಗಣೆ ನಿಷೇಧ ದಳಕ್ಕೆ ಚಾಲನೆ ನೀಡಿ, ಆ ದಳಕ್ಕೆ ೭೫೧ ದ್ವಿಚಕ್ರ ವಾಹನಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜಬೊಮ್ಮಾಯಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತಿತರರು ಉಪಸ್ಥಿತರಿದ್ದರು.