ಮಹಿಳೆಯರ ರಕ್ಷಣೆಗೆ ಸೇಫ್ಟಿ ಐಲ್ಯಾಂಡ್ ಸಹಾಯವಾಣಿ

ಬೆಂಗಳೂರು, ಜೂ.೨೭-ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಸೇಫ್ಟಿ ಐಲ್ಯಾಂಡ್ ಸಹಾಯವಾಣಿ ಕೇಂದ್ರಗಳಲ್ಲಿ ತೆರೆದಿದ್ದಾರೆ.
ಸೇಫ್ ಸಿಟಿ ಯೋಜನೆ ಅಡಿ ನಗರದ ಮೈಸೂರು ಬ್ಯಾಂಕ್ ವೃತ್ತ, ಇಂದಿರಾನಗರ , ಚಾಮರಾಜಪೇಟೆ, ಉಪ್ಪಾರ ಪೇಟೆ, ಎಂಜಿ ರೋಡ್ ಸೇರಿದಂತೆ ೩೦ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸುರಕ್ಷತಾ ದ್ವೀಪ’ (ಸೇಫ್ಟಿ ಐಲ್ಯಾಂಡ್) ಸ್ಥಾಪಿಸಲಾಗಿದೆ.
ರಸ್ತೆ ಬದಿ, ಮೆಟ್ರೊ ನಿಲ್ದಾಣದ ಆಸುಪಾಸಿನಲ್ಲಿ ನೀಲಿ ಬಣ್ಣದ ೧೦ರಿಂದ ೧೨ ಅಡಿ ಎತ್ತರದ ಯಂತ್ರವನ್ನು ಅಳವಡಿಸಲಾಗಿದೆ. ಅದರ ಮಧ್ಯ ಭಾಗದಲ್ಲಿ ಕೆಂಪು ಬಣ್ಣದ ಬಟನ್ ನೀಡಲಾಗಿದೆ. ಮಹಿಳೆಯರು ಅಪಾಯಕ್ಕೆ ಸಿಲುಕಿದ್ದರೆ ತಕ್ಷಣವೇ ಆ ಯಂತ್ರದ ಬಳಿಗೆ ತೆರಳಿ ಬಟನ್ ಒತ್ತಿದರೆ ಸಾಕು. ಅಲರಾಂನೊಂದಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಿರುವ ’ಕಮಾಂಡೊ ಸೆಂಟರ್’ಗೆ ದೃಶ್ಯ ಸಹಿತ ಮಾಹಿತಿ ರವಾನೆ ಆಗಲಿದೆ.
ಅಲ್ಲಿ ೨೪ ಗಂಟೆಯೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರೆ ಸ್ವೀಕರಿಸಿದ ಸಿಬ್ಬಂದಿ ಆಕೆಯನ್ನು ವಿಚಾರಿಸುತ್ತಾರೆ. ಆಕೆ ದೌರ್ಜನ್ಯಕ್ಕೆ ಒಳಗಾಗಿದ್ದರೆ ಸಮೀಪದಲ್ಲಿರುವ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಳುಹಿಸುತ್ತಾರೆ. ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿಗೆ ಮಹಿಳೆಗೆ ನೆರವಾಗುತ್ತಾರೆ.
ಎಲ್ಲ ಸುರಕ್ಷತಾ ದ್ವೀಪದ ಪಕ್ಕದಲ್ಲೇ ಸಿಸಿ ಟಿ.ವಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಸಂತ್ರಸ್ತರ ಸ್ಥಿತಿಯನ್ನು ಕಮಾಂಡೊ ಕೇಂದ್ರದಲ್ಲೇ ವೀಕ್ಷಣೆ ಮಾಡಲಾಗುತ್ತದೆ.
ನಗರವು ವಿಶಾಲವಾಗಿ ಬೆಳೆದಿದೆ. ಎಲ್ಲವನ್ನೂ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡುವುದು ಕಷ್ಟ. ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಂಡು ಆರೋಪಿಗಳ ಪತ್ತೆ ಚುರುಕುಗೊಳಿಸಲಾಗಿದೆ.
ಒಂದು ವೇಳೆ ಮಹಿಳೆಯ ಮೊಬೈಲ್ ಅನ್ನು ಆರೋಪಿ ಕಸಿದುಕೊಂಡಿದ್ದರೆ ಆಕೆಗೆ ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ದ್ವೀಪದ ಬಳಿಗೆ ತೆರಳಿ ಬಟನ್ ಒತ್ತಬೇಕು. ನಾವು ಸ್ಥಳಕ್ಕೆ ತೆರಳಿ ಸಂತ್ರಸ್ತೆಯನ್ನು ಸಲಹಾ ಕೇಂದ್ರಕ್ಕೆ ಕರೆದೊಯ್ದು ಆಪ್ತ ಸಮಾಲೋಚನೆ ಮಾಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ.
೧೧೨ಕ್ಕೆ ಕರೆ ಮಾಡಿ…!
ಸದ್ಯ ಜಾರಿಯಲ್ಲಿರುವ ೧೧೨ಕ್ಕೂ ಕರೆ ಮಾಡಬಹುದು. ಸೈಬರ್ ಅಪರಾಧಕ್ಕೆ ಒಳಪಟ್ಟಲ್ಲಿ ೧೯೩೦ಕ್ಕೆ ಕರೆ ಮಾಡಬಹುದು. ಆಗಲೂ ಸಿಬ್ಬಂದಿಯನ್ನು ಸ್ಥಳಕ್ಕೆ ಬರಲಿದ್ದಾರೆ.