ಮಹಿಳೆಯರ ಮೇಲೆ ದೌರ್ಜನ್ಯ ವಿರೋಧಿಸಿ ಪ್ರಚಾರಾಂದೋಲನ

ಹುಳಿಯಾರು, ಆ. ೮- ಅಖಿಲ ಭಾರತ ಸಿಐಟಿಯು ಸಂಘಟನೆ ಸಂಯೋಜಿತ ಸಂಘಟನೆಗಳಾದ ಅಂಗನವಾಡಿ ನೌಕರರ ಸಂಘ, ಗ್ರಾಮ ಪಂಚಾಯ್ತಿ ನೌಕರರ ಸಂಘ ಮತ್ತು ಕರ್ನಾಟಕ ಪ್ರಾಂತ್ಯ ರೈತ ಸಂಘಟನೆಗಳಿಂದ ಬೆಲೆ ಏರಿಕೆ, ಖಾಸಗೀಕರಣ, ಕಾರ್ಮಿಕ ವಿರೋಧಿ ನೀತಿಗಳ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರೋಧಿಸಿ ಹಂದನಕೆರೆ ಹೋಬಳಿಯ ಮತಿಘಟ್ಟದಲ್ಲಿ ಪ್ರಚಾರಾಂದೋಲನ ನಡೆಸಲಾಯಿತು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ಎ.ಪುಷ್ಪಾವತಮ್ಮ ಮಾತನಾಡಿ, ಎಲ್ಲ ದುಡಿಯುವ ವರ್ಗದವರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸಬೇಕು. ಮಹಿಳೆಯರಿಗೆ ರಕ್ಷಣೆ ಸಿಗಬೇಕು, ಮಹಿಳಾ ಪರವಾದ ಎಷ್ಠೇ ಕಾನೂನುಗಳಿದ್ದರೂ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಶೋಷಣೆ ನಡೆಯುತ್ತಿರುವುದು ಹೆಚ್ಚಾಗಿದೆ. ದುಡಿಯುವ ಮಹಿಳೆಯರಿಗೆ ರಕ್ಷಣೆ ಸಿಗಬೇಕು. ದೇಶದಲ್ಲಿ ಕಾರ್ಮಿಕರ ವಿರೋಧಿ ಕಾನೂನುಗಳು ಬದಲಾಗಬೇಕು. ರೈತರು ಆದಾಯ ಹೆಚ್ಚಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಮುಖ್ಯವಾಗಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಹಾಗಾಗಿ ದೇಶದೆಲ್ಲೆಡೆ ಹೋರಾಡುವ ವಾತಾವರಣ ಸೃಷ್ಠಿಯಾಗಿದೆ. ಈ ವ್ಯವಸ್ಥೆ ಬದಲಾಗಬೇಕು. ಸಮಾಜದ ದುಡಿಯುವ ಜನರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ದೀನದಲಿತರಿಗೆ ಕೆಳ ವರ್ಗದ ಜನರಿಗೆ ಉಳಿಗಾಲವಿಲ್ಲ. ದುಡಿಯುವ ಜನರೆಲ್ಲಾ ಒಂದಾಗಬೇಕು. ವಿರೋಧಿ ಕಾನೂನುಗಳನ್ನು ಬದಲಾಯಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಪದಾಧಿಕಾರಿಗಳಾದ ನಾಗಸುಂದರ, ಪಾರ್ವತಮ್ಮ, ವತ್ಸಲ, ರಾಧಾ, ಶಿವಮ್ಮ, ವೀಣಾ ಮತ್ತಿತರರು ಉಪಸ್ಥಿತರಿದ್ದರು.