
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ‘ಮಹಿಳೆಯರ ಮೇಲಿನದೌರ್ಜನ್ಯ ಕೊನೆಗಾಣಲಿ’, ‘ಬೆಲೆ ಏರಿಕೆ ,ನಿರುದ್ಯೋಗ ತಡೆಗಟಿ’,ಶಿಕ್ಷಣ-ಆರೋಗ್ಯದ ವ್ಯಾಪಾರೀಕರಣ ನಿಲ್ಲಲಿ’ ಎಂದು ಆಗ್ರಹಿಸಿಇಂದು ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಂ.ಎಸ್.ಎಸ್) ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎ.ಐ.ಯು.ಟಿ.ಯು.ಸಿ) ಸಂಘಟನೆಗಳ ವತಿಯಿಂದ ಜಂಟಿಯಾಗಿ ಪ್ರತಿಭಟನಾಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಗೆ ಭಾಷಣಕಾರರಾಗಿ ಆಗಮಿಸಿದ್ದ ಎ.ಐ.ಎಂ.ಎಸ್.ಎಸ್.ನ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಎಂ.ಎನ್.ಮಂಜುಳಾರವರು ಮಾತನಾಡುತ್ತಾ “ಮಾರ್ಚ್ 8 – ಅಂತರರಾಷ್ಟ್ರೀಯ ಮಹಿಳಾ ದಿನವು ಸುವರ್ಣಾಕ್ಷರಗಳಲ್ಲಿ ಬರೆದಿಡುವಐತಿಹಾಸಿಕ ದಿನವಾಗಿದೆ.1908ರ ಮಾರ್ಚ್ 8 ರಂದು ನ್ಯೂಯಾರ್ಕ್‍ನ ಸಿದ್ಧ ಉಡುಪು ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಸಾವಿರಾರು ಮಹಿಳಾ ಕಾರ್ಮಿಕರು ಅಲ್ಲಿನ ಮಾಲೀಕರು ಹಾಗೂ ಸರ್ಕಾರದ ತೀವ್ರ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದರು. ಕಾರ್ಖಾನೆಗಳಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿಯ ವಿರುದ್ಧ,ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ, ದುಡಿಮೆಯಅವಧಿ 8 ಗಂಟೆಗೆ ನಿಗಧಿಪಡಿಸುವಂತೆ, ಹೆರಿಗೆ ರಜೆಯ ಹಕ್ಕಿಗಾಗಿ ಆಗ್ರಹಿಸಿ 13 ವಾರಗಳ ಕಾಲ ಕೊರೆಯುವ ಚಳಿಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ಅಲ್ಲಿನ ಸರ್ಕಾರ ಅವರ ಮೇಲೆ ಗುಂಡಿನ ಮಳೆಗರೆಯಿತು.ನ್ಯೂಯಾರ್ಕ್‍ನಬೀದಿಗಳು ಈ ಹೋರಾಟಗಾರ್ತಿಯರ ರಕ್ತದಿಂದ ಕೆಂಪಾದವು. ಇದು ಮುಂದಿನ ಅನೇಕ ಬಲಿಷ್ಠ ಹೋರಾಟಗಳಿಗೆ ನಾಂದಿಹಾಡಿತು. ಹುತಾತ್ಮ ಮಹಿಳೆಯರು ವಿಶ್ವದ ಸ್ತ್ರೀ ಜನಾಂಗಕ್ಕೆ ಪ್ರೇರಕ ಶಕ್ತಿಯಾದರು.ಈ ಐತಿಹಾಸಿಕ ಮಹಿಳಾ ಹೋರಾಟದ ಸ್ಮರಣೆಯಲ್ಲಿ ಖ್ಯಾತ ಸಮಾಜವಾದಿ ನಾಯಕಿಯಾದ ಕ್ಲಾರಾ ಜೆಟ್ ಕಿನ್ ರವರು ಕೊಪೆನ್ ಹೆಗೆನ್ ನಲ್ಲಿ 1910 ರಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್ 8ನ್ನು ಅಂತರರಾಷ್ಟ್ರೀಯ ಮಹಿಳಾ ದಿನ” ಎಂದು ಘೋಷಿಸಿ ಅದಕ್ಕೆ ವಿಶ್ವಮಾನ್ಯತೆ ನೀಡಿದರು.
ಇಂದು ಬಂಡವಾಳಶಾಹಿಗಳಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ನೀಡುವ, ದುಡಿತದ ಅವಧಿಯನ್ನು ಹೆಚ್ಚಿಸುವ ಕರಾಳ ಕಾರ್ಖಾನೆಗಳ ಮಸೂದೆ 2023 ನ್ನು ಅಂಗೀಕರಿಸಿರುವುದು ಅತ್ಯಂತ ಮಹಿಳಾ ಮತ್ತು ಕಾರ್ಮಿಕ ವಿರೋಧಿಯಾಗಿದೆ.ಸಾವಿರಾರು ಕಾರ್ಮಿಕರು ರಕ್ತಹರಿಸಿ ಗಳಿಸಿಕೊಂಡಂತಹ ಹಲವು ಕಾರ್ಮಿಕ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿರುವ ಸರ್ಕಾರಗಳ ನೀತಿಗಳನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎ.ಐ.ಯು.ಟಿ.ಯು.ಸಿ.ಯಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಶಾಂತರವರುಮಾತನಾಡುತ್ತಾ,“ಕೊರೋನಾ ಕಾಲಘಟ್ಟದಲ್ಲಿ ಜನರ ಬದುಕು ಬೀದಿಗೆ ಬಂದಿದೆ. ಕೋಟ್ಯಾಂತರ ಉದ್ಯೋಗಗಳು ನಾಶವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಆರ್ಥಿಕ ನೀತಿಗಳು ಜನರನ್ನು ಬಾಣಲೆಯಿಂದ ನೇರವಾಗಿ ಬೆಂಕಿಗೆ ಎಸೆದಂತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆಶಾ, ಅಂಗನವಾಡಿ,ಬಿಸಿಯೂಟ ಯೋಜನೆಯಲ್ಲಿ ಹಾಗೂ ಗಾರ್ಮೆಂಟ್ಸ್‍ನಲ್ಲಿ ದುಡಿಯುವ ಅಸಂಖ್ಯಾತ ಅಸಂಘಟಿತ ಮಹಿಳಾ ಕಾರ್ಮಿಕರು ಗೌರವಯುತ ಕನಿಷ್ಠ ವೇತನದಿಂದ, ಉದ್ಯೋಗ ಭದ್ರತೆಯಿಂದ ವಂಚಿತರಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾ,ಅಂಗನವಾಡಿ ಮುಂತಾದ ಅಸಂಘಟಿತ ವಲಯದ ಕಾರ್ಮಿಕರಿಗೆ ರೂ.25,000 ಕನಿಷ್ಠ ವೇತನ ನಿಗದಿ ಮಾಡಬೇಕು,ಮಹಿಳೆಯರು ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಐ.ಎಂ.ಎಸ್.ಎಸ್‍ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಈಶ್ವರಿ ಯವರು ವಹಿಸಿಕೊಂಡಿದ್ದರು.
ಸಂಘಟನೆಯ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ವಿದ್ಯಾ, ರೇಖಾ, ಗಿರಿಜಾ, ಪದ್ಮಾ, ಶಾಂತಾ, ಪ್ರಮೋದ್, ಸುರೇಶ್ ಮತ್ತು ವಿವಿಧ ಬಡಾವಣೆ,ಹಳ್ಳಿ ಮಹಿಳೆಯರು ಭಾಗವಹಿಸಿದ್ದರು.