ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗೆ ಸಂವಹನ ಕೊರತೆ: ವಿಜಯಕುಮಾರ

ಬೀದರ,ಫೆ.22:ದೇಶದಲ್ಲಿ ವಾಮ ಮಾರ್ಗದಿಂದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ನಡೆಯುತ್ತಿದ್ದು ಇವುಗಳನ್ನು ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೀದರ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ ಹೇಳಿದರು.

ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೀದರ, ಸಹಭಾಗೀದಾರ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣ ಘಟಕ ಬೀದರ ಇವರ ಸಂಯುಕ್ತಾಶ್ರದಲ್ಲಿ ಬೀದರ ನಗರದ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಯ ಕುರಿತು ಸಹಭಾಗೀದಾರರ ಇಲಾಖೆ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಮಹಿಳೆಯ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತಿ ಹಂತದಲ್ಲಿ ಸಹಭಾಗೀದಾರರ ಇಲಾಖೆಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿದ್ದು, ಈ ಎಲ್ಲಾ ತಂಡಗಳ ನಡುವೆ ಸಂವಹನದ ಕೊರತೆಯಿಂದ ಅನೈತಿಕ ಸಾಗಾಣಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಬೀದರನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ ಮಾತನಾಡಿ ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಅನೈತಿಕ ಸಾಗಾಣಿಕೆ ತಡೆಗಟ್ಟುವ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇನ್ನು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಬೀದರನ ಜಿಲ್ಲಾ ಅಧ್ಯಕ್ಷೆ ರಜಿಯಾ ಬಳಬಟ್ಟಿ ಮಾತನಾಡಿ, ಹೆಣ್ಣನ್ನು ನಾವೆಲ್ಲರೂ ವಸ್ತು ಎಂದು ಭಾವಿಸಿದ್ದೇವೆ ಈ ಮನೋಭಾವನೆ ನಮ್ಮಿಂದ ದೂರವಾಗಬೇಕು. ಹೆಣ್ಣು ಜೀವ ಚೈತನ್ಯವಾದರೆ ಮಗು ಈ ದೇಶದ ಆಸ್ತಿಯಾಗಿದೆ ಇವರಿಬ್ಬರ ಬಗ್ಗೆ ನಮ್ಮಲ್ಲಿರುವ ನಿಷ್ಕಾಳಜಿ ನಮಗೆ ಮುಂದೆ ದೊಡ್ಡ ಅಪಾಯ ತಂದೊಡ್ಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಪ್ರಶಾಂತ ಬಿರಾದಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಕಲ್ಮಲಕರ್, ಮಕ್ಕಳ ಸಮಿತಿ ಸದಸ್ಯ ಮಂಜುಳಾ, ಸುದರ್ಶನ ಬಿರಾದಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.ಪುಷ್ಪಲತ ಸ್ವಾಗತಿಸಿದರು. ಗೌರಿಶಂಕರ ಪರತಾಪೂರೆ ನಿರೂಪಿಸಿದರು.