
ರಾಯಚೂರು,ಸೆ.೧೫- ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕತೆ ಸುಧಾರಣೆಗೆ ಇಲಾಖೆಯಿಂದ ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು, ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಯಾನಂದ ಎಂ.ಬೇಲೂರೆ ಅವರು ತಿಳಿಸಿದರು.
ಅವರು ಸೆ.೧೪ರ(ಗುರುವಾರ) ನಗರದ ಆಶ್ರಯ ಕಾಲೋನಿ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ, ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೌಷ್ಠಿಕತೆ ಎಂಬುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದು, ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡುವುದು ಪ್ರತಿಯೊಬ್ಬರ ಜವಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ ಮಾತನಾಡಿ, ಮಾತೃಪೂರ್ಣ ಯೋಜನೆಯಡಿ ಎಲ್ಲ ಗರ್ಭಿಣೀ ಬಾಣಂತಿಯರು ಅಂಗನವಾಡಿ ಕೇಂದ್ರದಲ್ಲಿಯೇ ಆಹಾರ ಸೇವನೆ ಮಾಡುವುದರಿಂದ ಪೋಷಕಾಂಶಗಳು ತಾಯಿ ಮತ್ತು ಶಿಶುವಿಗೆ ದೊರೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶರಣಮ್ಮ ಕಾರನೂರ, ವೆಂಕಟೇಶ ದೇಸಾಯಿ, ಅಂಗನವಾಡಿ ಕೇಂದ್ರದ ಹಿರಿಯ ಮೇಲ್ವಿಚಾರಕಿ ಮಹಾಲಿಂಗಮ್ಮ, ವಲಯ ಮೇಲ್ವಿಚಾರಕಿ ಭಾರತಿ ಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ಶಂಶಾದ, ಶಾಂತ, ವಿರುಪಾಕ್ಷಮ್ಮ ಸೇರಿದಂತೆ ಜಿಲ್ಲಾ ನಿರೂಪಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.