ಉಚಿತ ಪ್ರಯಾಣ ತುಂಬಿ ತುಳುಕಿದ ಬಸ್‌ಗಳು

ಹುಬ್ಬಳ್ಳಿ, ಜೂ. ೧೮- ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ನಂತರ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ಇಂದೂ ಕೂಡ ಹೆಚ್ಚಾಗಿದೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ದಂಡು ತಂಡೋಪತಂಡವಾಗಿ ಹರಿದು ಬರುತ್ತಿದೆ.
ರಜಾದಿನ ಭಾನುವಾರವಾದ ಇಂದು ಬಸ್‌ಗಳಲ್ಲಿ ಭಾರಿ ನೂಕುನುಗ್ಗಲು ಸೀಟು ಗಿಟ್ಟಿಸಲು ಮಹಿಳೆಯರು ತಮ್ಮ ಮಕ್ಕಳನ್ನು ಕಿಟಕಿ ಮೂಲಕ ಹತ್ತಿಸಿ ಸೀಟು ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು.
ಚಿಕ್ಕಮಗಳೂರಿನಲ್ಲಿ ಮಹಿಳೆಯೊಬ್ಬಳು ಸೀಟು ಪಡೆಯಲು ಚಾಲಕ ಕುಳಿತುಕೊಳ್ಳುವ ಸ್ಥಳದಿಂದ ಹತ್ತಿ ಸೀಟು ಪಡೆದ ಘಟನೆಯೂ ನಡೆದಿದೆ. ಬಸ್ಸಿಗಾಗಿ ಕಾದು ಕುಳಿತು ಬಸ್ ಬಂದ ನಂತರ ಮಹಿಳೆಯರು ಏಕಾಏಕಿ ಮುಗಿಬಿದ್ದಿದ್ದರಿಂದ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ ಸೇರಿದಂತೆ ನಂಜನಗೂಡು, ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯ ಸೇರಿದಂತೆ ಇತರ ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣಗಳಿಗೆ ಮಹಿಳೆಯರ ದಂಡು ಹರಿದು ಬಂದಿದೆ.
ಈ ಮಧ್ಯೆ ಹುಬ್ಬಳ್ಳಿ-ಧಾರವಾಡದಲ್ಲೂ ಕಾಂಗ್ರೆಸ್ ಸರ್ಕಾರದಿಂದ ‘ಶಕ್ತಿ’ ಯೋಜನೆ ಜಾರಿಯಾದ ಮೇಲೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ತೀವ್ರ ಹೆಚ್ಚಳವಾಗಿದ್ದು, ಆಷಾಡ ಮಾಸದ ಮಣ್ಣೆತ್ತಿನ ಅಮವಾಸ್ಯೆಯ ದಿನವಾದ ಇಂದು ಧಾರವಾಡ ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗಗಳ ದೇವಸ್ಥಾನಗಳಿಗೆ ಮಹಿಳಾ ಭಕ್ತರು ಭೇಟಿ ನೀಡಿ, ಬಸ್‌ಗಳು ತುಂಬಿ ತುಳುಕುತ್ತಿವೆ.
ನಗರದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ, ಶ್ರೀ ಮೂರುಸಾವಿರ ಮಠ, ಲಕ್ಷ್ಮೇಶ್ವರದ ದೂಧ್‌ಪೀರಾಂ ದರ್ಗಾ, ಶಿರಹಟ್ಟಿಯ ಶ್ರೀ ಫಕೀರೇಶ್ವರ ಸ್ವಾಮಿಗಳ ದೇವಸ್ಥಾನ, ಕಾರಡಗಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಗುಡಿ-ಗುಂಡಾರಗಳಿಗೆ ಭಕ್ತರು ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದಾರೆ.
ಇಂದು ಮುಂಜಾನೆಯಿಂದಲೇ ನಗರದ ಹೊಸೂರು ಬಸ್‌ನಿಲ್ದಾಣ ಸೇರಿದಂತೆ ಇನ್ನಿತರ ಮಾರ್ಗಮಧ್ಯೆ ಬಸ್‌ಸ್ಟಾಪ್‌ಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಕಾಯ್ದು ನಿಂತು ಬಸ್‌ಗಳನ್ನು ಹತ್ತುತ್ತಿದ್ದ ದೃಷ್ಯ ಕಂಡು ಬರುತ್ತಿತ್ತು.
ಭರ್ತಿ ಬಸ್ಸುಗಳನ್ನು ಹತ್ತಲು ವೃದ್ಧರು, ಮಕ್ಕಳು, ಅಂಗವಿಕಲರು ತಡಕಾಡಬೇಕಾದ ಸ್ಥಿತಿ ನಿರ್ಮಾಣವಾಯಿತು.ಬಸ್ಸಿನೊಳಗೆ ಉಸಿರುಗಟ್ಟಿಸುವ ವಾತಾವರಣದಲ್ಲಿ ಪುಟ್ಟ ಪುಟ್ಟ ಕೂಸುಗಳು ಅಳುತ್ತಿದ್ದವು. ಪರಿಸ್ಥಿತಿ ನಿಯಂತ್ರಿಸಲು ನಿರ್ವಾಹಕ ಇನ್ನಿಲ್ಲದ ಕಸರತ್ತು ಪಡಬೇಕಾಯಿತು.