ಮಹಿಳೆಯರ ಜತೆ ಯಧುವೀರ್ ಪತ್ನಿ ತ್ರಿಷಿಕಾ ಸಂವಾದ

ಸಂಜೆವಾಣಿ ನ್ಯೂಸ್
ಮೈಸೂರು: ಏ.17:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪರ ಅವರೊಂದಿಗೆ ನಿನ್ನೆಯಷ್ಟೇ ಮಹಾರಾಜ ಗ್ರೌಂಡ್‍ನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಯದುವೀರರ ಪತ್ನಿ ಶ್ರೀಮತಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಇಂದು ಬ್ಯೂಟಿಷಿಯನ್ಸ್ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಉದ್ಯಮಿಗಳನ್ನು ಕುರಿತು ವಿಡಿಯೋ ಸಂದೇಶದ ಮೂಲಕ ಯದುವೀರರ ಪರ ಮೊದಲ ಬಾರಿಗೆ ಮತ ಕೇಳುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ನಗರದ ಗೋವಿಂದ್ ರಾಜ್ ಮೆಮೊರಿ ಹಾಲ್‍ನಲ್ಲಿ ಬ್ಯೂಟಿಷಿಯನ್ ವೆಲ್ ಫ್ಲೇರ್ ಅಸೋಸಿಯೇಷನ್ ಹಾಗೂ ಬಿಜೆಪಿ ಮಹಿಳಾ ಮೋರ್ಚವತಿಯಿಂದ ಆಯೋಜಿಸಿದ್ದ ತ್ರಿಷಿಕಾ ಕುಮಾರಿ ಯದುವೀರ್ ಒಡೆಯರ್ ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಜಾರಿ ಮಾಡಿರುವ ನಾರಿಶಕ್ತಿ ಉತ್ತೇಜಿಸುವ ಕಾರ್ಯಕ್ರಮಗಳ ಸ್ಮರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ಶಕ್ತಿಗಳಾದ ನಾರಿ ಶಕ್ತಿ, ಯುವಶಕ್ತಿ, ರೈತಶಕ್ತಿ ಬಡವರ್ಗದವರು ಇವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅದರಲ್ಲೂ ನಾರಿ ಶಕ್ತಿಯನ್ನು ಉತ್ತೇಜಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮುದ್ರಾಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಇದರಿಂದ ಸಾಕಷ್ಟು ಮಹಿಳೆಯರು ಲಾಭವನ್ನು ಪಡೆದಿದ್ದಾರೆ ಹಾಗೂ ಕೇಂದ್ರ ಸರ್ಕಾರವು ಮಹಿಳೆಯರಿಗೆ ಶೇಕಡ 33ರಷ್ಟು ರಿಸರ್ವೇಶನ್ ಅನ್ನು ನೀಡಿರುವುದನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಸ್ತ್ರೀ ಕುಲಕ್ಕೆ ಸಮಾನ ಹಕ್ಕು ಕೊಟ್ಟಿದ್ದು ರಾಜ ಮನೆತನ
ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಮತ ಬ್ಯಾಂಕ್ ಆಧಾರಿತ ದೂರದೃಷ್ಟಿತ್ವ ಇಲ್ಲದ ಯೋಜನೆಗಳು ಭವಿಷ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ ,ನೂರಾರು ವರ್ಷಗಳ ದೂರದೃಷ್ಟಿತ್ವವನ್ನು ಇಟ್ಟುಕೊಂಡು ಯುಗ ಮರೆಯದ ಗ್ಯಾರಂಟಿ ನೀಡಿದ್ದು ಮೈಸೂರಿನ ರಾಜ ವಂಶಸ್ಥರಾದರೆ, ಬದುಕು ಕಟ್ಟಿಕೊಡುವ ಯೋಜನೆಗಳನ್ನು ರೂಪಿಸಿ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯವರದು ಯುಗ ಮೆಚ್ಚುವ ಕೊಡುಗೆಯಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು (ಕೌಟಿಲ್ಯ)ಹೇಳಿದರು.
ಸ್ವಾತಂತ್ರ್ಯಾಪೂರ್ವದಲ್ಲೇ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಮೈಸೂರಿನ ಆಳರಸರು ಸ್ಥಾಪಿಸಿದ ಅನೇಕ ಉದ್ದಿಮೆಗಳಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳ ಉದ್ದಿಮೆಗಳೂ ಸೇರಿದ್ದವು.
ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಗಂಧದ ಎಣ್ಣೆ, ಉತ್ಪನ್ನಗಳು ಇದರಲ್ಲಿ ಪ್ರಮುಖವಾಗಿದ್ದು, ಮೈಸೂರನ್ನು ಸಾಂಸ್ಕೃತಿಕ ನಗರಿಯನ್ನಾಗಿಸುವುದರ ಜೊತೆಗೆ ಸಾಂಪ್ರದಾಯಿಕ ಸೌಂದರ್ಯ ಪ್ರಜ್ಞೆ ಹೆಚ್ಚಿಸುವಲ್ಲಿಯೂ ಅವರ ಕೊಡುಗೆ ಮಹತ್ವದಾಗಿತ್ತು. ಅದೇ ಮಾದರಿಯಲ್ಲಿ ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ, ಮತದಾನದ ಹಕ್ಕು ಹಾಗೂ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟ ಕೀರ್ತಿ ಮೈಸೂರಿನ ಯದುವಂಶಕ್ಕೆ ಸೇರಬೇಕಾಗಿದೆ ಎಂದು ಅವರು ಹೇಳಿದರು.
ಮೈಸೂರಿನ ಯದುವಂಶದ ಅಸ್ತಿತ್ವವನ್ನು ಉಳಿಸಲು ಹಾಗೂ ಯಶಸ್ವಿ ಆಡಳಿತ ನಡೆಸಲು ಮಹಾರಾಣಿಯರು ಹಾಗೂ ರಾಜಮಾತೆಯರ. ತ್ಯಾಗ ಹಾಗೂ ಕೊಟ್ಟ ಕೊಡುಗೆಗಳು ಚಾರಿತ್ರಿಕ ಗೌರವಕ್ಕೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಹಾಗೂ ವಾಣಿವಿಲಾಸ ಸನ್ನಿಧಿ ಅವರ ಕೊಡುಗೆ ಭಾರತದ ಸ್ತ್ರೀಕುಲ ಹಾಗೂ ಮೈಸೂರಿನ ಇತಿಹಾಸ ಶಾಶ್ವತವಾಗಿ ಮರೆಯದಂತ ಕೊಡುಗೆಗಳಾಗಿವೆ.
ಆಧುನಿಕ ಶ್ರೀರಾಮನಂತೆ ಆಡಳಿತ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನಾಲ್ವಡಿಯವರು ಅಧಿಕಾರಕ್ಕೆ ಬರುವ ಮೊದಲೇ ವ್ಯವಸ್ಥಿತ ಯೋಜನೆ ರೂಪಿಸಿದ ಹೆಗ್ಗಳಿಕೆ ವಾಣಿವಿಲಾಸ ಅವರಿಗೆ ಸಲ್ಲಬೇಕು. ಕನ್ನಂಬಾಡಿ ಕಟ್ಟೆ ಕಟ್ಟಲು ವಾಣಿವಿಲಾಸ ಸನ್ನಿಧಿ ಅವರು ಹಾಗೂ ಸೊಸೆ ಮಹಾರಾಣಿ ಪ್ರತಾಪ ಕುಮಾರಿ ಅವರು ಸಮರ್ಪಿಸಿದ ಚಿನ್ನದ ಆಭರಣಗಳಿಂದಾಗಿ ಅವರ ಚಿನ್ನದಂತಹ ವ್ಯಕ್ತಿತ್ವವನ್ನು ಶಾಶ್ವತವಾಗಿ ಜನ ನೆನೆಯುವಂತೆ ಅನಾವರಣಗೊಳಿಸಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರದ ಬಿಜೆಪಿ ನಗರಾಧ್ಯಕ್ಷರಾದ ಎಲ್.ನಾಗೇಂದ್ರ ಮಹಿಳಾ ಅಧ್ಯಕ್ಷೆ ರೇಣುಕ ರಾಜು, ಮಾಜಿ ಸಚಿವ ಎಸ್.ಎ.ರಾಮದಾಸ್, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು, ಬಿಜೆಪಿ ಜಿಲ್ಲಾ ಪ್ರಭಾರಿ ಮೈ.ವಿ.ರವಿಶಂಕರ್, ಅಸೋಸಿಯೇಷನ್ಸ್ ಅಧ್ಯಕ್ಷರಾದ ವೇದರೈ ಹಾಗೂ ಉಮಾ ಜಾದವ್, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಲಾ ಹಾಗೂ ಮಮತಾ ಶೆಟ್ಟಿ ಇನ್ನಿತರರು ಹಾಜರಿದ್ದರು.