ಮಹಿಳೆಯರ ಕೃತಿಗಳನ್ನು ಪುರುಷರು ಓದಬೇಕು

ಕಾರ್ಕಳ : ಸ್ತ್ರೀ ಪ್ರಧಾನ ಕಥೆ, ಸಾಹಿತ್ಯ, ನಾಟಕಗಳನ್ನು ಸ್ತ್ರೀಯರಿಗಿಂತಲೂ ಪುರುಷರೆ ಓದಿ ಅರಿತುಕೊಳ್ಳಬೇಕು. ಭಿನ್ನ ಭಿನ್ನ ಕಾಲಘಟ್ಟಗಳಲ್ಲಿ ಸಮಾಜದಲ್ಲಿ ಸ್ತ್ರೀಯರು ಅನುಭವಿಸಿದ ನೋವು, ಸಂಕಟ, ಅವರ ಹೋರಾಟ – ಯಶಸ್ಸು ಮತ್ತು ಅವರು ಎದುರಿಸಿದ ಸವಾಲುಗಳನ್ನು ಅವರ ಸ್ಥಾನದಲ್ಲಿ ನಿಂತು ಪುರುಷರು ತಿಳಿದುಕೊಳ್ಳಬೇಕು ಎಂದು ಕಥೆಗಾರ ವಿನಾಯಕ ಕುಡ್ವ ಕಾರ್ಕಳ ಅವರು ನುಡಿದರು.
ಅವರು ಕಾರ್ಕಳ ವನಿತಾ ಸಮಾಜ ಮತ್ತು ಹೊಸಸಂಜೆ ಬಳಗದ ಆಶ್ರಯದಲ್ಲಿ ವೀಣಾ ಶಾನಭೋಗ್ ಅವರು ರಚಿಸಿದ ವಾಣಿಯ ವೀಣೆಯ ತಂತಿಗಳು ಕೃತಿಯ ಕುರಿತ ಸಂವಾದ ಮತ್ತು ವಿಮರ್ಶೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ
ಮಾತನಾಡಿದರು.
’ಪುರಾಣ ಇತಿಹಾಸ ಕಥೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಕಥೆಗಳಲ್ಲಿ ಬರುವ ಪಾತ್ರಗಳನ್ನು ಅರ್ಥೈಸಿಕೊಳ್ಳುವುದು ಸರಳವಲ್ಲ. ಲೇಖಕಿ ಸ್ವತಃ ಕಥೆಗಳ ವಸ್ತು ಹಾಗೂ ಪಾತ್ರಗಳ ಒಳಹೊಕ್ಕು ತಾವೇ ಆ ಪಾತ್ರಗಳಾಗಿ ಚಿಂತಿಸಿದಾಗ ಮಾತ್ರ ಆ ಪಾತ್ರಗಳ ಗಹನತೆ ಮತ್ತು ಆಳ-ವಿಸ್ತಾರ ಸತ್ವಗಳ ಪರಿಚಯವಾಗಲು ಸಾಧ್ಯ. ಕಾವ್ಯ ಕಥನಗಳ ಪಾತ್ರದೊಳಗೆ ಲೇಖಕಿ ಸ್ವಯಂ ಪರಕಾಯಪ್ರವೇಶದಂತಹ ಸಾಧನೆ ಮಾಡಬೇಕಾಗುತ್ತದೆ’ ಎಂದು ವಿನಾಯಕ ಕುಡ್ವ ಅಭಿಪ್ರಾಯಪಟ್ಟರು.
ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಮಾಲತಿ ಜಿ.ಪೆ ಅವರು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ’ಪುರಾಣ ಕಥೆಗಳಲ್ಲಿ ಬರುವ ಪಾತ್ರಗಳಲ್ಲಿ ವ್ಯಕ್ತವಾಗುವ ಸಂವೇದನೆ ಸಮಕಾಲೀನ ಬದುಕಿನಲ್ಲಿ ಕೂಡ ಸಮಾನಾಂಶಗಳಾಗಿವೆ. ಸ್ತ್ರೀಸಂವೇದನೆ ಎಲ್ಲ ಕಾಲಘಟ್ಟಗಳಲ್ಲೂ ಕಾವ್ಯ ಸಾಹಿತ್ಯದಲ್ಲಿ ಮಹತ್ವದ ಪರಿಣಾಮ ಉಂಟುಮಾಡಿರುವುದನ್ನು ನೋಡಬಹುದಾಗಿದೆ’ ಎಂದರು.
ವನಿತಾ ಸಮಾಜದ ಸ್ಥಾಪಕ ಸದಸ್ಯೆ ಮತ್ತು ಮಾಜಿ ಅಧ್ಯಕ್ಷೆ ಪ್ರಭಾ ಶೆಣೈ, ಕೃತಿಯ ಲೇಖಕಿ ವೀಣಾ ಶಾನಭೋಗ್ ಉಪಸ್ಥಿತರಿದ್ದರು.
ವನಿತಾ ಸಮಾಜದ ಅಧ್ಯಕ್ಷೆ
ಸುನೀತಾ ಶೆಟ್ಟಿ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ‍್ಯಕ್ರಮ ನಿರ್ವಹಿಸಿದರು. ಶಶಾಂಕ್ ಪೆ ವಂದಿಸಿದರು.