ಮಹಿಳೆಯರ ಕಲ್ಯಾಣಕ್ಕೆ ಸರ್ಕಾರ ಬದ್ಧ ಶ್ರೀರಾಮುಲು

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜು.14: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವುದು ಸರ್ಕಾರದ ಮುಖ್ಯ ಅದ್ಯತೆಯಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರು ನಿನ್ನೆ ನಗರದಲ್ಲಿ ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳಿಗೆ ಸಹಾಯಧನ ಚೆಕ್ ವಿತರಣೆ ಮತ್ತು ಗ್ರಾಮಗಳಲ್ಲಿ ಕಸ ಸಂಗ್ರಹಣೆ ಮಾಡುವ ವಾಹನಗಳ ಚಾಲನೆಗೆ ಮಹಿಳೆಯರಿಗೆ ಪರವಾನಿಗೆ ಪತ್ರ ನೀಡಿ. ಅಲ್ಲದೆ 100 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಿ‌ ಮಾತನಾಡುತ್ತಿದ್ದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಗೆ 10 ವರ್ಷ ತುಂಬಿದ್ದು, 2022-23 ನೇ ವರ್ಷವನ್ನು ‘ಜೀವನೋಪಾಯ ವರ್ಷ’ ಎಂದು ಆಚರಿಸಲಾಗುತ್ತದೆ ಈ ಮಿಷನ್ ಅಡಿಯಲ್ಲಿ 1100 ಕೋಟಿಗಳ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ಸ್ವಸಹಾಯ ಗುಂಪುಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು 1.5 ಲಕ್ಷ ರೂ ಸಹಾಯವನ್ನು ನೀಡಲಾಗುತ್ತದೆ ಇದಕ್ಕಾಗಿ ಈ ವರ್ಷ 500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಯೋಜನೆಯಿಂದ 3.9ಲಕ್ಷ ಮಹಿಳೆಯರಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಒಟ್ಟಾರೆ ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸರಕಾರ ಈ ಸಾಲಿನಲ್ಲಿ 43,188 ಕೋಟಿ ರೂ ಗಳನ್ನು ಮೀಸಲಿಟ್ಟಿದೆ. ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರೋತ್ಸಾಹಿಸಲು, ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ ನಿರ್ವಹಿಸಲ್ಪಡುವ ಕ್ಯಾಂಟೀನ್ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುವುದೆಂದು ಹೇಳಿದರು.