
ಕಲಬುರಗಿ. ಜ.7:ದೇಶದ ಪ್ರತಿಯೊಬ್ಬ ಮಹಿಳೆಯರ ಏಳಿಗೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಪಾತ್ರ ಬಹುದೊಡ್ಡದು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಹಾಗೂ ಹೋರಾಟಗಾರ್ತಿ ಕೆ. ನೀಲಾ ಅವರು ಹೇಳಿದರು.
ನಗರದ ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ಮಾತೋಶ್ರೀ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾವಿತ್ರಿಬಾಯಿ ಫುಲೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಮಹಿಳಾ ಚಿಂತಕಿಯಾಗಿ ನಮ್ಮ ನಡುವೆ ಇಂದಿಗು ಇದ್ದಾರೆ ಇಂದಿನ ಮಹಿಳೆಯರು ಮೌಡ್ಯತೆಯನ್ನು ಬಿಟ್ಟು ಶಿಕ್ಷಣವಂತರಾಗಬೇಕು ಎಂದರು.
ಯಾವ ದೇಶದಲ್ಲಿ ಹೆಣ್ಣು ಮಕ್ಕಳು ಶಿಕ್ಷಣವಂತರಾಗಿರುತ್ತಾರೊ ಆ ದೇಶ ಪ್ರಗತಿಯ ಹಾದಿಯಲ್ಲಿರುತ್ತದೆ. ಫುಲೆ ದಂಪತಿಗಳು ಅಂದಿನ ಕಾಲದ ವೈದಿಕ ಸಂಪ್ರದಾಯಗಳನ್ನು ತೊರೆದು ಕೆಳಸಮುದಾಯದ ದಲಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ದೇಶದ ಪ್ರಥಮ ಶಿಕ್ಷಕಿಯಾಗಿದ್ದರು ಎಂದು ಅವರು ಹೇಳಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ಐ.ಎಸ್. ವಿದ್ಯಾಸಾಗರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯಾಗಿ ಸಮಾಜ ಸುಧಾರಕಳಾಗಿ, ಲೇಖಕಳಾಗಿ, ಸತ್ಯ ಶೋಧಕ ಸಮಾಜವನ್ನು ಮುನ್ನಡೆಸಿದ ಮತೆಯಾಗಿ ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಮಾರುತಿರಾವ್ ಡಿ. ಮಾಲೆ ಅವರು ವಹಿಸಿದ್ದರು. ವೇದಿಕೆಯ ಮೇಲೆ ಸಂಸ್ಥೆಯ ಸದಸ್ಯರಾದ ಶಾಂತಪ್ಪ ಸೂರನ್ ಅವರು ಉಪಸ್ಥಿತರಿದ್ದರು. ಶ್ರೀಮತಿ ನಿರ್ಮಲಾ ಸಿರಗಾಪುರ ಅವರು ವಂದಿಸಿದರು. ಡಾ. ವಸಂತರ್ ನಾಸಿ ಅವರು ಕಾರ್ಯಕ್ರಮ ನಿರೂಪಿಸಿದರು. ನ್ಯಾಕ್ ಕೋ-ಆರ್ಡಿನೇಟರ್ ಗಿರೀಶ್ ಮೀಶಿ, ಡಾ. ಗಾಂಧೀಜಿ ಮೋಳಕೆರೆ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.