ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಸಹಕಾರಿ

ಚೇಳೂರು, ಸೆ. ೧೬- ಸಾರ್ವಜನಿಕರ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರ ಮೂರು ಸಾವಿರ ಬಸ್‌ಗಳನ್ನು ಖರೀದಿಸುತ್ತಿದ್ದು, ಶಕ್ತಿ ಯೋಜನೆಯಿಂದಾಗಿ ಮಹಿಳೆಯರಿಗೆ ಉಚಿತವಾಗಿ ಸಂಚರಿಸಲು ಅನುಕೂಲವಾಗಿದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲುಘಟ್ಟದಿಂದ ಬೆಂಗಳೂರುವರೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಡೇರಿಸಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರದ ಪ್ರಥಮ ಆದ್ಯತೆಯಾಗಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಲಾಭದಾಯಕವಾಗಿದೆ ಎಂದರು.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರಿಗೆ ಧಾರ್ಮಿಕ ಸ್ಥಳಗಳು, ಪ್ರವಾಸಿ ಸ್ಥಳಗಳಿಗೆ ತೆರಳಲು ಅನುಕೂಲವಾಗಿದೆ. ಕಾಂಗ್ರೆಸ್ ಸರ್ಕಾರ ಬಡವರ, ಶೋಷಿತ ವರ್ಗದವರ ಪರವಾಗಿದೆ. ಯಾರು ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯನ್ನು ತಂದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸಲ್ಲುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಡವರ ಪರವಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಯಮುನಾ, ಉಪಾಧ್ಯಕ್ಷೆ ದಿವ್ಯಜೋತಿ, ಕೆಂಪಯ್ಯ, ಮಂಜುಳ, ಅನ್ನಪೂರ್ಣಮ್ಮ, ಯೋಗೇಶ್, ಪ್ರಭಾಕರ್‌ಮೂರ್ತಿ, ಕಾಂಗ್ರೆಸ್ ಮುಖಂಡರಾದ ಅಳಿಲುಘಟ್ಟ ರಮೇಶ್, ಮಂಜಣ್ಣ, ವಿಜಯಕುಮಾರ್, ರೇಣುಕರಾಧ್ಯ, ಸಿದ್ದರಾಮಣ್ಣ, ಮಂಜುನಾಥ್ ಬಾಬಣ್ಣ, ಸಣ್ಣರಂಗಯ್ಯ, ಶ್ರೀಧರ್‌ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.