(ಸಂಜೆವಾಣಿ ವಾರ್ತೆ)
ಹುಮನಾಬಾದ್: ಜೂ.13:ರಾಜ್ಯದ ಎಲ್ಲ ಮಹಿಳೆಯರಿಗೆ ಅನ್ವಯವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯಾದಾದ್ಯಂತ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಏಕಕಾಲಕ್ಕೆ ಚಾಲನೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ನೀಡದ ಭರವಸೆಯಂತೆ, ಉಳ್ಳವರು ಹಾಗೂ ಇಲ್ಲದವರು ಎಂಬ ಯಾವುದೇ ಬೇಧ ಭಾವವಿಲ್ಲದೆ ಈ ಯೋಜನೆ ಜಾರಿಗೆ ತರಲಾಗಿದೆ. ಎಲ್ಲ ತಾಯಂದಿರು ಹಾಗೂ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮಾತನಾಡಿ, ರಾಜ್ಯದ ಬಡಜನರ ಕಲ್ಯಾಣಕ್ಕೆ ಕಾಂಗ್ರೆಸ್ ಸರಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯಲ್ಲಿ ಬಡಜನರಿಗಾಗಿ ಉತ್ತಮವಾದ ಯೋಜನೆಗಳನ್ನು ನೀಡಲಾಗಿತ್ತು. ಇಗ ಮತ್ತೋಮ್ಮೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ರಾಜ್ಯದ ಬಡಜನರ ಮನೆ ಬಾಗಿಲಿಗೆ ಮುಟ್ಟುವಂತ ಯೋಜನೆಗಳು ಅನುಷ್ಠಾನ ಆಗಲಿವೆ ಎಂದರು.
ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಚಿಟಗುಪ್ಪ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಬಸ್‍ನಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಮಹಿಳೆಯರಿಗೆ ಟಿಕೆಟ್ ವಿತರಿಸಿದರು.
ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಪುರಸಭೆ ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಪುರಸಭೆ ಸದಸ್ಯರಾದ ವಿಜುಕುಮಾರ, ಸವಿತಾ ಸೊಂಡೆ, ವಿಜಯಕುಮಾರ ದುರ್ಗದ್, ಸೈಯದ್ ಬಾಸೀದ್, ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ವಿಠಲರಾವ ಕದಮ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಹತ್ಯಾಳ್, ದತ್ತಕುಮಾರ ಚಿದ್ರಿ, ಪ್ರಭು ತಾಳಮಡಗಿ, ಬಾಬುರಾವ ಪರಮಶಟ್ಟಿ ಸೇರಿ ಸಾರಿಗೆ ಸಂಸ್ಥೆ ಸಿಬ್ಬಂಧಿಗಳು ಇದ್ದರು.