
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ:ಸೆ.09:- ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಧರ್ಮಸ್ಥಳ ಸಂಸ್ಥೆ ತನ್ನ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಅವರು ಪಟ್ಟಣದ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂದು ಸ್ವಯಂ ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಧರ್ಮಸ್ಥಳ ಸಂಘವು ಹಲವು ವರ್ಷಗಳಲ್ಲಿ ತಾಲೂಕಿನಲ್ಲಿ ಸಾವಿರಾರು ಮಹಿಳೆಯರು ಸ್ವಾವಲಂಬಿ ಬದುಕು ಕಂಡುಕೊಂಡು, ಕುಟುಂಬದ ಆರ್ಥಿಕತೆಗೆ ಹೆಗಲೊಡ್ಡಿದೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹೆಚ್ಚಿನ ದಾಖಲೆಗಳ ಜಂಜಾಟವಿಲ್ಲ. ಕಡಿಮೆ ಬಡ್ಡಿ ದರದಲ್ಲಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಸಾಲ ಪಡೆಯಬಹುದಾಗಿದೆ. ಹೀಗಾಗಿ ಸಣ್ಣ-ಪುಟ್ಟ ವ್ಯಾಪಾರ ಆರಂಭಿಸಬೇಕು ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳಿಸಬೇಕೆಂಬ ಕನಸು ಕಾಣುವ ಪಟ್ಟಣ ಮತ್ತು ಗ್ರಾಮೀಣ ಭಾಗದ ಅದೆಷ್ಟೋ ಬಡ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭರವಸೆಯ ಬೆಳಕಾಗಿದೆ ಎಂದರು. ಗ್ರಾಮೀಣ ಸೇವೆಯ ಜೊತೆಗೆ ಧರ್ಮ ಮತ್ತು ಸಂಸ್ಕೃತಿಯ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಹಬ್ಬ ಹರಿದಿನಗಳ ಆಚರಣೆಯಿಂದ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತಷ್ಟು ಶ್ರೀಮಂತವಾಗುತ್ತದೆ. ಮಹಿಳಾ ಸಂಘಗಳನ್ನು ಒಗ್ಗೂಡಿಸಿ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ವೇದಿಕೆ ನಿರ್ಮಿಸುವ ಮೂಲಕ ಧರ್ಮಸ್ಥಳ ಸಂಸ್ಥೆ ನಮ್ಮ ಸನಾತನ ಧರ್ಮ ಸಂರಕ್ಷಣೆಯ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಮನ್ಮುಲ್ ನಿರ್ದೇಶಕ ಕೆ.ರವಿ (ಡಾಲು ರವಿ) ಮಾತನಾಡಿ ಧರ್ಮಸ್ಥಳ ಸಂಘ ಯಾವುದೆ ಜಂಜಾಟದ ದಾಖಲೆ ಇಲ್ಲದೆ ಸಾಲ ನೀಡುತ್ತದೆ. ಸಾಲ ತೆಗೆದುಕೊಂಡು ದುಂದು ವೆಚ್ಚ ಮಾಡಿ ಸಂಕಷ್ಟಕ್ಕೆ ಸಿಲುಕುವ ಬದಲು ಅದನ್ನು ಸದ್ಬಳಕೆ ಮಾಡಿಕೊಂಡು ಬದುಕು ಗಟ್ಟಿಗೊಳಿಸಿಕೊಂಡರೆ ಕುಟುಂಬದ ಅಭಿವೃದ್ದಿಯಾಗುತ್ತದೆಯಲ್ಲದೆ ಸಂಘಕ್ಕೂ ಉತ್ತಮ ಹೆಸರು ಬರುತ್ತದೆ. ಒಳ್ಳೆಯ ಆಲೋಚನೆ ಮತ್ತು ಸನ್ನಡತೆ ರೂಢಿಸಿಕೊಂಡಾಗ ನಾವು ಸಮಾಜಕ್ಕೆ ಆಸ್ತಿಯಾಗುತ್ತೇವೆ. ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ತಿಳಿಸಿದರು
ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಕೆ.ಎಸ್.ರಾಜೇಶ್, ಬಿ..ಆರ್.ಇಂದಿರಾ ಸತೀಶ್ ಬಾಬು, ಲತಾ ಅರವಿಂದ್,ಜ್ಯೋತಿ ಕ್ಷೇತ್ರ ಯೋಜನಾಧಿಕಾರಿ ಮಮತಾ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.