ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಅಗತ್ಯ

ಮಧುಗಿರಿ, ಜು. ೨೫- ಮಹಿಳೆಯರು ಕುಟುಂಬದ ಕಣ್ಣುಗಳಿದ್ದಂತೆ, ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಆದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸ್ತ್ರೀ ರೋಗ ತಜ್ಞರಾದ ಡಾ. ಮಹಾಲಕ್ಷ್ಮಿ ಕರೆ ನೀಡಿದರು.
ತಾಲ್ಲೂಕಿನ ನೇರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ತುಮಕೂರು ಶ್ರೀದೇವಿ ವೈದ್ಯಕೀಯ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಆರೋಗ್ಯದ ಬಗ್ಗೆ, ಸ್ತ್ರೀ ರೋಗಗಳ ಬಗ್ಗೆ ಹೆಚ್ಚಿನ ಜಾಗೃತಿ ಇರಬೇಕು ಎಂದರು.
ಸ್ವಚ್ಛತೆಗೆ ಆದ್ಯತೆ ಕೊಟ್ಟು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಹದಿಹರೆಯದವರು, ಮಕ್ಕಳು ಹಾಗೂ ಸಾಧಾರಣ ಮತ್ತು ಗಂಭೀರ ತೂಕದ ಮಕ್ಕಳು ಸೇರಿದಂತೆ ಇತರೆ ನ್ಯೂನ್ಯತೆಯುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ಶಿಕ್ಷಣ ಅಧಿಕಾರಿ ಶೇಷಾದ್ರಿ ಮಾತನಾಡಿ ತಾಲ್ಲೂಕು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರ ತಂಡವು ಆಯೋಜಿಸಿರುವ ಈ ಶಿಬಿರವು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅನುಕೂಲವಾಗಲೆಂದು ತೀರ್ಮಾನಿಸಿ ನೇರಳೆಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಇದನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ರಂಗನಾಥ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮಿಪತಿ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಮೆಡಿಕಲ್ ಕಾಲೇಜುಗಳು ಗ್ರಾಮೀಣ ಭಾಗದ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಸ್ತ್ರೀರೋಗದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನೇರಳೆಕೆರೆ ಗ್ರಾ.ಪಂ. ಅಧ್ಯಕ್ಷರಾದ ನಾಗಲಕ್ಷ್ಮಿ, ವೈದ್ಯರಾದ ಲಾವಣ್ಯ. ಮೇಘ, ರಕ್ಷ, ಸಿಂಚನ, ಚೈತ್ರ, ವಿನಯ್, ಕಿರಣ್, ಜ್ಯೋತಿ, ಗ್ರಾ.ಪಂ. ಸದಸ್ಯರಾದ ಉಮಾದೇವಿ, ಬರಹಗಾರ ಈಶ್ವರ್‌ಪ್ರಸಾದ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.