ಮಹಿಳೆಯರೇ ಅಧಿಕಾರ ಚಲಾಯಿಸಬೇಕು 

ಚಿತ್ರದುರ್ಗ, ಮಾ.8: ಸ್ಥಳೀಯ ಸ್ವಯಂ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡಲಾಗಿದ್ದು, ಅನೇಕ ಮಹಿಳೆಯರು ಅಧ್ಯಕ್ಷರು, ಉಪಾಧ್ಯಕ್ಷರು ಆಗಿದ್ದರು ಕೂಡ ಮಹಿಳೆಯರು ಅಧಿಕಾರಿ ಚಲಾಯಿಸುವ ಬದಲಿಗೆ ಗಂಡಂದಿರು ಅಧಿಕಾರ ಚಲಾಯಿಸುತ್ತಿದ್ದಾರೆ. ಇದು ಬದಲಾಗಬೇಕು. ಮಹಿಳೆಯರೇ ಅಧಿಕಾರ ಚಲಾಯಿಸಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.ನಗರದ ತರಾಸು ರಂಗಮಂದಿರದಲ್ಲಿ  ಕರ್ನಾಟಕ ರಾಜ್ಯ ಮಹಿಳಾ ಆಯೋಗ,‌ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಎನ್.ಆರ್.ಎಲ್.ಎಂ. ಸಂಜೀವಿನಿ ಸಹಯೋಗದಲ್ಲಿ  ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಲೋಕಸಭಾ ಹಾಗೂ ವಿಧಾನಸಭೆಯಲ್ಲಿ ಶೇ.33 ರಷ್ಟು ಮೀಸಲಾತಿಗೆ ಬೇಡಿಕೆಯಿದೆ, ಆದರೆ ಅದು ಇನ್ನೂ ಈಡೇರಿಲ್ಲ. ಅಮೇರಿಕ ದೇಶದ ಚುನಾವಣೆಯಲ್ಲಿ ಮಹಿಳೆ ರಾಷ್ಟ್ರ ಅಧ್ಯಕ್ಷೆಯಾಗಿಲ್ಲ. ಆದರೆ ಭಾರತ, ಪಾಕಿಸ್ತಾನ, ಬಾಂಗ್ಲಾ ಶ್ರೀಲಂಕಾ ಸೇರಿದಂತೆ ಏಷ್ಯಾ ದೇಶಗಳಲ್ಲಿ ಮಹಿಳೆಯರು ದೇಶದ ಉನ್ನತ ಸ್ಥಾನಗಳನ್ನು ಅಲಕಂರಿಸಿದ್ದಾರೆ ಎಂದು ಹೇಳಿದ ಅವರು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಮಹಿಳಾ ಸಂಘಟನೆಗಳು ಹಾಗೂ ಸಹಕಾರಿ ಸಂಘಗಳು ಮುತುವರ್ಜಿಯಿಂದ ನಡೆಸಿಕೊಂಡು ಹೋಗುತ್ತಿದ್ದು, ಇದರಿಂದ ಮಹಿಳಾ ಸಂಘಗಳಿಗೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತಿವೆ. ಗ್ರಾಮೀಣ ಬ್ಯಾಂಕ್ ಮಹಿಳಾ ಸಂಘಗಳಿಂದ ಠೇವಣಿ ಇಡುತ್ತಿದ್ದಾರೆ. ಇದರಿಂದ ಬ್ಯಾಂಕ್‌ಗಳಲ್ಲಿ ಹಣ ಹೆಚ್ಚಾಗಿ ಸುಲಲಿತವಾಗಿ ಕಾರ್ಯ ನಿರ್ವಹಿಸಲು ಸಹಾಯವಾಗಿದೆ ಎಂದು ಹೇಳಿದರು.ಭಾರದಲ್ಲಿ ವಿಶೇಷವಾಗಿ ಮಹಿಳೆಯರು ಎಲ್ಲಾ ರಂಗದಲ್ಲಿ ಬಾಗವಹಿಸುತ್ತಿದ್ದಾರೆ‌ ಸರ್ಕಾರ ಮಹಿಳೆಯರು ಹಾಗೂ ಸಂಘಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಬಹುದಿನಗಳ ಹಿಂದೆ ಮಹಿಳೆ ಜನಿಸಿದರೆ ಬೇಸರ ಪಡುವ ಸಂಗತಿ ಇತ್ತು. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚವೋ, ಬೇಟಿ ಪಡವೋ ಎಂಬ ಯೋಜನೆ ಜಾರಿಗೆ ತಂದಿದೆ. ಜನನಕ್ಕೆ ಮುನ್ನವೇ ಹೆಣ್ಣು ಮಗುವಿನ ರಕ್ಷಣೆ ಕಾನೂನು ರೂಪಿಸುತ್ತಿದ್ದಾರೆ. ಇದರ ಫಲವಾಗಿ ದೇಶದಲ್ಲಿ ಲಿಂಗಾನುಪಾತದಲ್ಲಿ ಸ್ತ್ರೀಯರು ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ ಅವರು, ಸರ್ಕಾರದ ಯೋಜನೆಗಳನ್ನು ಮಹಿಳಾ ಹೆಸರಿನಲ್ಲಿ ನೀಡಲಾಗುತ್ತದೆ. ಮಹಿಳೆಯರು ಆಸ್ತಿಯನ್ನು ಕಾಪಾಡುತ್ತಾರೆ ಎನ್ನುವುದು ಇದಕ್ಕೆ ಕಾರಣ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ‌ ಪ್ರಸ್ತಾವಿಕವಾಗಿ ಮಾತನಾಡಿ, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿನ ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವ ದಿನವೇ ಮಹಿಳಾ ದಿನಾಚರಣೆ ಆಗಿದೆ. 1910 ರಲ್ಲಿ ಕ್ಲಾರಾ ಜಟ್ ಮಹಿಳಾ ದಿನಾಚರಣೆಗೆ ಅಡಿಪಾಯ ಹಾಕಿದರು. 1975 ರಲ್ಲಿ ವಿಶ್ವ ಸಂಸ್ಥೆಯಿಂದ ಅಧಿಕೃತವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಧ್ಯೇಯ ವಾಖ್ಯೆ ‘ಲಿಂಗಸಮಾನತೆಗಾಗಿ ನಾವಿನ್ಯತೆ ಹಾಗೂ ತಂತ್ರಜ್ಞಾನ ‘ ಎಂಬುದಾಗಿದೆ. ವಿಶ್ವ ನಾವಿನ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆದರೂ ಈ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಶೇ.22 ರಷ್ಟು ಮಾತ್ರ ಇದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಮಾಡುವಲ್ಲಿ ಪ್ರೇರಣೆ ನೀಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆರು ಹಾಗೂ ಸಹಾಯಕರು, ಅಸಾಧಾರಣ ಸಾಧನೆ ಮಾಡಿದ ಜಿಲ್ಲೆಯ ಮಕ್ಕಳಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಾಮ ನಿರ್ದೇಶನ ಸದಸ್ಯೆ ರೇಖಾ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿ.ಪಂ. ಸಿ.ಇ.ಓ ದಿವಾಕರ ಎಂ.ಎಸ್. ಸ್ತ್ರೀ ಶಕ್ತಿ ಕೂಟದ ಅಧ್ಯಕ್ಷರು ಕೊಲ್ಲಿ ಲಕ್ಷ್ಮೀ, ಮಕ್ಕಳ ಕಲ್ಯಾಣ ಸಮಿತಿ  ಸದಸ್ಯೆ ಡಿ.ಕೆ.ಶೀಲಾ, ಬಾಲ ನ್ಯಾಯಮಂಡಳಿ ಸದಸ್ಯೆ ಸುಮನ ಅಂಗಡಿ ಸೇರಿದಂತೆ ಮತ್ತಿತರರು‌ ಇದ್ದರು.