
ಕಲಬುರಗಿ:ಮಾ.11: ಮಹಿಳೆಯರು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದು ಉನ್ನತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಗುಂಡಮ್ಮ ಮಡಿವಾಳ್ ಅವರು ಕರೆ ನೀಡಿದರು.
ನಗರದಲ್ಲಿ ಶನಿವಾರ ಆಶಾ ಸಂಘಟನೆ ನಗರ ಹಾಗೂ ಗ್ರಾಮೀಣ ಘಟಕಗಳಿಂದ ಹಮ್ಮಿಕೊಂಡಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನ ಹಾಗೂ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಅಂತರ್ರಾಷ್ಟ್ರೀಯ ಮಹಿಳಾ ದಿನವೂ ಒಂದು ಹೋರಾಟದ ಸ್ಫೂರ್ತಿಯ ದಿನವಾಗಿದೆ. ಇಂದಿನ ಮಹಿಳೆಯರ ಸಮಸ್ಯೆಗಳಿಗೂ ಈ ದಿನವನ್ನು ನಾವು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.
1908ರಲ್ಲಿ ಅಮೇರಿಕದ ಚಿಕ್ಯಾಗೋದಲ್ಲಿ ಹೆಣ್ಣು ಮಕ್ಕಳು ಅವರ ದುಡಿಮೆಗೆ ತಕ್ಕ ಪ್ರತಿಫಲ ಹಾಗೂ ಗರ್ಭಿಣಿ ರಜೆ ಇನ್ನೂ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟವನ್ನು ಕಟ್ಟಿದ ದಿನ. ಮುಂದೆ ಮಾರ್ಚ್ 8ನ್ನು ಹೋರಾಟಗಾರ್ತಿ ಕ್ಲಾರಾ ಜಟೈನ್ ಅವರು ಹೆಣ್ಣು ಮಕ್ಕಳು ಅವರ ಹಕ್ಕಿಗಾಗಿ ಹೋರಾಟ ಮಾಡುವ ದಿನವಾಗಬೇಕು ಎಂದು ಕರೆ ಕೊಟ್ಟರು. ಇದು ಇತಿಹಾಸ ಎಂದು ಅವರು ಹೇಳಿದರು.
ನಾವು ಇಂದು ಸಹ ಹೆಣ್ಣು ಮಕ್ಕಳ ಹಲವಾರು ರೀತಿಯ ಸಮಸ್ಯೆಗಳನ್ನು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಸರಿಯಾದ ಭದ್ರತೆ ಇಲ್ಲ. ಚಿಕ್ಕಮಕ್ಕಳು, ವಯಸ್ಸಾದವರು ಅನ್ನದೇ ಅವರ ಮೇಲೆ ಅತ್ಯಾಚಾರ ಆಗುತ್ತಿದೆ. ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ನಮಗೆ ಆ ಹೋರಾಟ ಇಂದು ಸ್ಫೂರ್ತಿ ಆಗಬೇಕಾಗಿದೆ. ಹಾಗೆ ಮಹಿಳೆಯರು ಆ ನಿಟ್ಟಿನಲ್ಲಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಅವರು ಕರೆ ನೀಡಿದರು.
ಎಐಟಿಯುಟಿಸಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಜಿ. ದೇಸಾಯಿ ಅವರು ಮಾತನಾಡಿ, ಇಂದು ಸರ್ಕಾರ ಎಲ್ಲ ಬಡ ಹೆಣ್ಣು ಮಕ್ಕಳನ್ನು ಸ್ಕೀಮ್ ವರ್ಕರ್ ಹಣೆಪಟ್ಟಿಯ ಮೂಲಕ ಅತಿ ಹೀನಾಯವಾಗಿ ದುಡಿಸಿಕೊಳ್ಳುತ್ತಿದೆ. ಅವರ ದುಡಿಮೆಗೆ ತಕ್ಕ ವೇತನ ಇಲ್ಲ ಹಾಗೂ ಅವರ ಕೆಲಸಕ್ಕೆ ಸರಿಯಾದ ಗೌರವವೂ ಇಲ್ಲ. ಇದನ್ನು ಖಂಡಿಸಿ ನಾವು ಒಗ್ಗೂಡಿ ಹೋರಾಟವನ್ನು ಬೆಳೆಸಬೇಕಾಗಿದೆ. ಇನ್ನೊಂದು ಕಡೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹೆಣ್ಣು ಮಕ್ಕಳನ್ನು ಮಾಧ್ಯಮಗಳಲ್ಲಿ ತೋರಿಸುತ್ತಿರುವ ರೀತಿ ನಮ್ಮ ಸಾಂಸ್ಕøತಿಕ ಅಧ:ಪತನ ಆಗುತ್ತಿರುವುದನ್ನು ತೊರಿಸುತ್ತಿದೆ. ಇಲ್ಲಿಯ ಜನ ಜಾಗರೂಕರಾಗಬೇಕಿದೆ ಎಂದರು.
ಈ ಮಾರ್ಚ್ 8ರ ಸಂದೇಶವನ್ನು ಹಾಗೂ ಈವತ್ತು ಅದೇ ಸಮಸ್ಯೆಯನ್ನು ಎದುರಿಸುತ್ತಿರುವ ಜನರ ಮಧ್ಯೆ ತೆಗೆದುಕೊಂಡು ಹೋಗಬೇಕಾಗಿದೆ. ಅಂದು ಜನ ಅದರಲ್ಲಿಯೂ ಹೆಣ್ಣು ಮಕ್ಕಳು ಅವರ ಮತದಾನದ ಹಕ್ಕಿಗಾಗಿ ಶ್ರಮಕ್ಕೆ ಸರಿಯಾದ ವೇತನಕ್ಕಾಗಿ, ರಜೆಗಾಗಿ ಒಟ್ಟಾರೆ ಸಮಾನ ಹಕ್ಕಿಗಾಗಿ ಹೋರಾಟ ಮಾಡಿದ ದಿನವಾಗಿದ್ದರಿಂದ ಇಂದಿಗೂ ನಮ್ಮ ಪರಿಸ್ಥಿತಿ ಬದಲಾಗಿಲ್ಲ. ಇಲ್ಲಿ ನಾವು ಮತ್ತೆ ಹೋರಾಟವನ್ನು ಕಟ್ಟಬೇಕಾಗಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಆಶಾ ಗ್ರಾಮೀಣ ಹೊಸ ಅಧ್ಯಕ್ಷರನ್ನಾಗಿ ಶಿವಲಿಂಗಮ್ಮ ಹಾಗೂ ಕಾರ್ಯದರ್ಶಿಗಳನ್ನಾಗಿ ಜಯಶ್ರೀ ಅವರನ್ನು ಆಯ್ಕೆ ಮಾಡಲಾಯಿತು.