ಮಹಿಳೆಯರು ಹೋರಾಟಕ್ಕೆ ಮುಂದಾಗಬೇಕು

ದೇವದುರ್ಗ.ನ.೨೧-೨೧ನೇ ಶತಮಾನಕ್ಕೆ ಬಂದರೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯ, ಹಲ್ಲೆಯಂಥ ಅಮಾನುಷ ಘಟನೆಗಳು ನಿಂತಿಲ್ಲ. ಬದಲಿಗೆ ದಿನೇದಿನೆ ದೌರ್ಜನ್ಯ ಘಟನೆಗಳು ಹೆಚ್ಚಾಗುತ್ತಿವೆ. ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ ಮಾಡಲು ಮಹಿಳೆಯರ ಸಂಘಟಿತ ಹೋರಾಟಗಳು ನಿರಂತರವಾಗಿ ನಡೆಯಬೇಕು ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಹೇಳಿದರು.
ತಾಲೂಕಿನ ಜಾಲಹಳ್ಳಿಯ ಶ್ರಮಿಕ ಭವನದಲ್ಲಿ ಆಯೋಜಿಸಿದ್ದ ಜನವಾದಿ ಮಹಿಳಾ ಸಂಘಟನೆಯ ದೇವದುರ್ಗ ತಾಲೂಕು ಮಟ್ಟದ ಮೂರನೇ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು. ಮಹಿಳೆಯರ ಹಕ್ಕು ರಕ್ಷಣೆಗೆ ಒತ್ತಾಯಿಸಿ ಮತ್ತು ದೌರ್ಜನ್ಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನವಾದಿ ಮಹಿಳಾ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದೆ.
ಸಂವಿಧಾನದ ಹಕ್ಕು ಎಲ್ಲರಿಗೂ ಸಿಗಬೇಕು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಶೋಷಣೆಗೊಳಗಾದ ಮಹಿಳೆಯರನ್ನು ಸಮಾಜಮುಖಿಯನ್ನಾಗಿಸುವುದು ಸಂಘಟನೆಯ ಉದ್ದೇಶ. ಮಹಿಳೆಯರು ಧಾರಾವಾಹಿ ಮೂಲಕ ದಾರಿ ತಪ್ಪುತ್ತಿದ್ದಾರೆ. ಧಾರಾವಾಹಿ. ಅಡುಗೆ ಮನೆ ಬಿಟ್ಟು ಹೊರಗೆ ಬನ್ನಿ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ವರಲಕ್ಷ್ಮಿ, ಶಕುಂತಲಾ ದೇಸಾಯಿ, ಮರಿಯಮ್ಮ ಇತರರಿದ್ದರು.