ಮಹಿಳೆಯರು ಸ್ವಾವಲಂಭಿಗಳಾಗಬೇಕು : ಡಾ. ಅರುಣಾ ಕಾಮಿನೇನಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ. 08: ಮಹಿಳೆಯರು ಶಿಕ್ಷಣ, ಆರೋಗ್ಯ ಸೇರಿ ಸಾರ್ವಜನಿಕ ಜನಸೇವೆ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಾವಲಂಭಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಡಾ. ಅರುಣಾ ಕಾಮಿನೇನಿ ಕರೆ ನೀಡಿದರು.
ಅವರು ನಿನ್ನೆ ನಗರದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರೈತ ಭವನದ `ರೈತಣ್ಣ ಭೋಜನ’ ಸಭಾಂಗಣದಲ್ಲಿ ರೈತರಿಗೆ ಊಟ ಬಡಿಸುವ ಮೂಲಕ ವಿಶೇಷವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ, ಮಹಿಳೆಯರು ಸಮಾಜ, ವಿಜ್ಞಾನ, ಸಂಶೋಧನೆ, ರಾಜಕೀಯ ಹೀಗೇ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಖ್ಯಾತನಾಮರಾಗಿದ್ದಾರೆ ಎಂದರು.
ಅನೇಕ ಮಹಿಳೆಯರು ಸ್ವಶಕ್ತಿ, ಸ್ವ ಸಾಮಥ್ರ್ಯದ ಮೂಲಕ ಸ್ವಾವಲಂಭನೆಯ ಬದುಕನ್ನು ರೂಪಿಸಿಕೊಂಡು ಸಮಾಜದಲ್ಲಿ ಆದರ್ಶ ಜೀವನ ನಡೆಸುತ್ತಿದ್ದಾರೆ. ಗೃಹಣಿಯಾಗಿ, ವೈದ್ಯೆಯಾಗಿ, ಶಿಕ್ಷಕಿಯಾಗಿ, ಹಣಕಾಸು ನಿರ್ವಾಹಕಳಾಗಿ, ರಾಜಕಾರಣಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವುದು ಮಹಿಳೆಯ ಸಾಮಥ್ರ್ಯವಾಗಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಡಾ. ಶ್ರೀಲತ ರಾಧಾಕೃಷ್ಣ, ಡಾ. ನಾಗರತ್ನ ನಾರಾಯಣರಾವ್, ಸಂಗೀತ ಕಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಂಡು, ಮಹಿಳೆಯರು ಇಲ್ಲದ ಕ್ಷೇತ್ರವೇ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶಗಳು ಬೇಕಿವೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಿ. ಪದ್ಮಾವತಿ, ಮಮತಾರಾಜ್, ಪ್ರತಿಮಾ ನಾಗಳ್ಳಿ, ಕೆ.ಸಿ. ಲಕ್ಷ್ಮೀ ಸುರೇಶಬಾಬು, ನಿರ್ಮಲಾ ಆನಂದಬಾಬು ಇನ್ನಿತರರು ಮಹಿಳಾ ಅತಿಥಿಗಳನ್ನು ಸ್ವಾಗತಿಸಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜನಪರವಾದ ಸೇವಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಗಣ್ಯರಿಗೆ ವಿವರಿಸಿದರು.