
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.08: ನಗರದ ಬಸಲಿಂಗಪ್ಪ ವೀರಶೆಟ್ಟಿ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ತಾಲೂಕು ಪಂಚಾಯತ್ ನಿಂದ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಇ.ಓ ಮಹಾಂತಗೌಡ ಪಾಟೀಲ್ ಅವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ, ರಾಜಕೀಯ, ಶಿಕ್ಷಣ, ಕ್ರೀಡೆ ಎಲ್ಲ ವಲಯಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ವಿಶೇಷ ಆದ್ಯತೆ ಮೇರೆಗೆ ಮಹಿಳಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಸರಕಾರದಿಂದ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯ ಅಲ್ಲ, ಪಾಲ್ಗೊಳ್ಳುವುದು ಮುಖ್ಯ ಆಗಿರುತ್ತದೆ. ಕೆಲಸ ಒತ್ತಡ ನಿವಾರಣೆಗೆ ಕ್ರೀಡೆ ಅವಶ್ಯವಿದ್ದು, ಪ್ರತಿ ದಿನ ಕ್ರೀಡೆ ಸೇರಿದಂತೆ ಇತರ ಚಟುವಟಿಕೆಯಲ್ಲಿ ಭಾಗವಹಿಸಿ ಸಾಧನೆಗೈಯಲು ಮುಂದಗಾಬೇಕು ಎಂದರು.
ಮಹಿಳೆಯರು ಮೊದಲ ಬಾರಿಗೆ ಕ್ರಿಕೆಟ್ ಆಟ ಆಡುತ್ತಿದ್ದರಿಂದ ಎಲ್ಲರಲ್ಲೂ ಸಂಭ್ರಮದಿಂದ ಆಟವಾಡಿದರು. ಇವರಿಗೆ ಕ್ರಿಕೆಟ್ ಪ್ರಿಯರು, ತಾ.ಪಂ ಸಿಬ್ಬಂದಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ವಿಜಯಶಾಲಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರಿಕೆಟ್ ತಂಡವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ನಾಯಕ, ಮಲ್ಲಿಕಾರ್ಜುನ ಕಡಿವಾಳ, ಮಹ್ಮದ್ ಜುಬೇರ್ ನಾಯ್ಕ್, ವತ್ಸಲಾ, ಶರಣಮ್ಮ, ಕೃಷ್ಣಪ್ಪ, ವಿದ್ಯಾವತಿ, ಇಂದಿರಾ, ಕಿರಣ್ ಕುಮಾರ, ಕೃಷ್ಣ, ರವಿಶಾಸ್ತ್ರಿ, ಲಕ್ಷ್ಮೀದೇವಿ, ತಾಪಂ ವಿಷಯ ನಿರ್ವಾಹಕರು, ಸಿಬ್ಬಂದಿಗಳು, ನರೇಗಾ, ಎನ್ ಆರ್ ಎಲ್ ಎಂ- ಸಂಜೀವಿನಿ ಯೋಜನೆ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.