ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು

(ಸಂಜೆವಾಣಿ ವಾರ್ತೆ)
ಕಮಲನಗರ : ಜು.22:ಸ್ವ ಸಹಾಯ ಸಂಘದ ಮಹಿಳೆಯರು ಕುರಿ, ಕೋಳಿ ಸಾಕಾಣಿಕೆ, ಟೇಲರಿಂಗ್, ರೊಟ್ಟಿ ವ್ಯಾಪಾರ ಮಾಡುವುದರ ಜೊತೆಗೆ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ ಅವರು ಹೇಳಿದರು.
ತಾಲೂಕಿನ ಬೆಳಕುಣಿ (ಬಿಎಚ್) ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್. ಎಲ್.ಎಮ್) ಯೋಜನೆಯಡಿ ಸಸ್ಯ ನರ್ಸರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅಥಿತಿಗಳಾದ ತಾಲೂಕು ಪಂಚಾಯತನ ಮಾನ್ಯ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ ಅವರು ಮಾತನಾಡಿ ಎಲ್ಲ ಮಹಿಳೆಯರು ತಮ್ಮ ತಮ್ಮ ಮನೆಯ ಅಂಗಳದಲ್ಲಿ ನುಗ್ಗೆ, ನಿಂಬೆ, ಕರಿಬೇವು ಹೀಗೆ ತಮಗೆ ಬೇಕಾದ ಗಿಡಗಳನ್ನು ಬೆಳಸುವುದರಿಂದ ತಮಗೆಲ್ಲ ಪ್ರತಿದಿನ ಪೌಷ್ಟಿಕ ಆಹಾರ ತಿನ್ನಲು ಉಪಯುಕ್ತವಾಗುತ್ತದೆ. ಜೊತೆಗೆ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತ್ ಪಿಡಿಓ ದತ್ತಾತ್ರೀ ಅವರು ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕು. ಮಹಿಳೆಯರಿಗೆ ಅನೇಕ ಸೌಲಭ್ಯಗಳಿವೆ ಅದರ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಕವಿತಾ ಬಿರಾದಾರ ಸಂಜೀವಿನಿ ಯೋಜನೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ ಡಿಇಓ ವಿವೇಕಸ್ವಾಮಿ ನಿರೂಪಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ತಾಂತ್ರಿಕ ಸಂಯೋಜಕರು ತಾಲೂಕಾ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ವ ಸಹಾಯ ಸಂಘದ ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.