ಮಹಿಳೆಯರು ಸ್ವಾವಲಂಬಿಗಳಾಬೇಕು: ತಹಶೀಲ್ದಾರ್ ಸಿ.ಜೆ.ಗೀತಾ ಕರೆ

ತಿ.ನರಸೀಪುರ: ಮಾ.15:- ಮಹಿಳೆಯು ಉತ್ತಮ ಸಾಧನೆಗೈದಲ್ಲಿ ಮಾತ್ರ ಸಮಾಜ ಅವರನ್ನು ಒಳ್ಳೆಯ ದೃಷ್ಟಿಯಲ್ಲಿ ನೋಡುತ್ತದೆ.ಹಾಗಾಗಿ ಮಹಿಳೆಯರು ಪರಾವಲಂಬಿಗಳಾಗದೆ ತಮ್ಮ ಬೌದ್ಧಿಕ ಸಾಮಥ್ರ್ಯದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ತಹಶೀಲ್ದಾರ್ ಸಿ.ಜೆ.ಗೀತಾ ಕರೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟ, ತಾಲೂಕು ದಲಿತ ಜಾಗೃತಿ ವೇದಿಕೆಯ ಸಹಯೋಗದೊಂದಿಗೆ ಅಂತರ ರಾಷ್ಟ್ರೀಯ ‘ಮಹಿಳಾ ದಿನಾಚರಣೆ’ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಮಹಿಳೆ ಅಬಲೆಯಲ್ಲ, ಸಮಾಜದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿ ಬೆಳೆಯುವ ಸಾಮಥ್ರ್ಯ ಮಹಿಳೆಗಿದೆ. ತಮ್ಮಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನು ಸ್ವತಃ ಅವರೇ ಗುರುತಿಸಿಕೊಂಡು ಸಮಾಜದ ಮುನ್ನೆಲೆಗೆ ಬಂದು ಸಾಧನೆಯ ಹಾದಿಯತ್ತ ನಡೆಯಬೇಕು ಎಂದು ಕರೆ ನೀಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ ಕಲ್ಪಿಸಬೇಕು.ಶಿಕ್ಷಣ ಎಂಬುದು ಮನುಷ್ಯ ಜೀವನವದ ದಿಕ್ಕು ಬದಲಿಸುವ ಶಕ್ತಿ.ಹಾಗಾಗಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವ ಕಡೆ ಹೆಚ್ಚು ಗಮನಹರಿಸಬೇಕು.ಮಹಿಳೆಯರು ತಾವು ಮಹಿಳೆ ಎಂಬ ಕೀಳಿರಿಮೆಯನ್ನು ಬಿಟ್ಟು ಸಂದರ್ಭಕ್ಕನುಗುಣವಾಗಿ ಕೆಲಸಗಳನ್ನು ಮಾಡುತ್ತಾ ಗುರಿಯತ್ತ ಸಾಗಬೇಕು ಎಂದರು.
ಅತ್ಯಾಚಾರ ಎಂಬುದು ಮಹಿಳೆಯರಿಗೆ ಶಾಪವಾಗಿ ಪರಿಣಮಿಸಿದೆ.ಹಾಗಾಗಿ ಅತ್ಯಾಚಾರ ಎಂಬ ಪಿಡುಗನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಯ ಮಾಡುವ ಅವಶ್ಯಕತೆಯಿದೆ.ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಲ್ಲಿ ಎದೆಗುಂದದೆ ಕಾನೂನಿನ ನೆರವು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ ಮಾತನಾಡಿ,ಎರಡು ಕೈ ಸೇರಿದರೆ ಚಪ್ಪಾಳೆ ಆಗುವಂತೆ ,ಮಹಿಳೆ ಮತ್ತು ಪುರುಷ ಸಮಾಜ ಅಭಿವೃದ್ಧಿಗೆ ಅತ್ಯವಶ್ಯಕ.ಸಮಾಜದಲ್ಲಿ ಮಹಿಳೆಯನ್ನು ಪುರುಷರಿಗೆ ಸಮಾನವಾಗಿ ಕಾಣುವ ದೃಷ್ಟಿಕೋನ ಬೆಳೆಯಬೇಕು.ಹೆಣ್ಣು -ಗಂಡು ಎಂಬ ಲಿಂಗ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಸಂವಿಧಾನದ ಅಡಿ ಸರ್ಕಾರ ನೀಡಿರುವ ಹಲವು ಸವಲತ್ತುಗಳನ್ನು ಬಳಸಿಕೊಂಡು ಮಹಿಳೆಯರು ಶೈಕ್ಷಣಿಕ ಅರ್ಹತೆಯನ್ನು ಪಡೆಯುವ ಕಡೆ ಹೆಚ್ಚು ಗಮನಹರಿಸಬೇಕು.ಅಲ್ಲದೆ ಮಹಿಳೆಯರಿಗೆ ಇರುವ 33% ಮೀಸಲಾತಿ ಅಡಿ ಗ್ರಾಮೀಣ ಮಹಿಳೆಯರು ಶಿಕ್ಷಣ ಪಡೆದು ರಾಜಕೀಯ,ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ತಾಲೂಕು ದಲಿತ ಒಕ್ಕೂಟ ಅಧ್ಯಕ್ಷ ಸೋಸಲೆ ಶಶಿಕಾಂತ್ ,ಬಿಜೆಪಿ ಎಸ.ಸಿ ಮಾಧ್ಯಮ ವಕ್ತಾರ ಸೋಸಲೆ ಶಕುನಾರ್ ,ದಲಿತ ಜಾಗೃತಿ ಸಮಿತಿ ತುಂಬಲಾ ಮನುಜುನಾಥ್, ಸರ್ಕಾರಿ ಅಭಿಯೋಜಕರು ಸುಮಿತ್ರ ,ತುಂಬಲ ಮರಿಸ್ವಾಮಿ, ಗಣೇಶ್ ಸ್ವಾಮಿ ,ಮೋಹನಕುಮಾರಿ, ತಾಲೂಕು ಕಾರ್ಯಕ್ರಮ ವ್ಯವಸರಪಕರು ರೂಪಶ್ರೀ ,ಸಂಜೀವಿನಿ ಮೇಲ್ವಿಚಾರಕ ಸುರೇಶ ಸ್ವಾಮಿ, ಮನು, ತಲಕಾಡು ಗ್ರಾ.ಪಂ.ಸದಸ್ಯೆ ಪಾರ್ವತಿ, ಜಯಲಕ್ಷ್ಮಿ ಇತರರು ಹಾಜರಿದ್ದರು.