ಮಹಿಳೆಯರು ಸ್ವಚ್ಛತೆ ಕಾಪಾಡಿದರೆ, ದೇಶವೇ ಸ್ವಚ್ಛವಾದಂತೆ

ಕಲಬುರಗಿ:ಜು.22:ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ ಬಳಕೆಯ ಬಗ್ಗೆ ಮತ್ತು ಅದರ ಮಹತ್ವದ ಕುರಿತು ಅರಿವು ಕಾರ್ಯಕ್ರಮವನ್ನು ದಿನಾಂಕ: 21-07-2022 ರಂದು ಕಲಬುರಗಿ ನಗರದ ಬಸವ ನಗರ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನ ಶಿಕ್ಷಣ ಸಂಸ್ಥಾನದ ತಾಲ್ಲೂಕು ಸಂಯೋಜಕರಾದ ಶ್ರೀಮತಿ ಪಾರ್ವತಿ ಹಿರೇಮಠ ರವರು ಮಾತನಾಡುತ್ತಾ ಇಂದಿನ ದಿನಗಳಲ್ಲಿ ನಾವು ಸ್ವಚ್ಛತೆಗೆ ಎಷ್ಟು ಮಹತ್ವ ನೀಡಬೇಕೆಂದರೆ ಸ್ವಚ್ಛತೆ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಬೇಕು. ಎಲ್ಲರೂ ಮಹಿಳೆಯರು ತಮ್ಮ ತಿಂಗಳ ಮುಟ್ಟಿನ ಸಂದರ್ಭದಲ್ಲಿ ಬಟ್ಟೆಗಳನ್ನು ಬಳಸುವುದನ್ನು ಬಿಟ್ಟು ಸ್ಯಾನಿಟರಿ ಪ್ಯಾಡಗಳನ್ನು ಬಳಸಬೇಕು. ಇದರಿಂದ ನಮಗೆ ಸೋಂಕು ತಗಲುವುದಿಲ್ಲ. ಒಂದು ವೇಳೆ ನಾವು ಬಟ್ಟೆಗಳನ್ನು ಬಳಸಿದ್ದೇ ಆದರೆ ಆ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆ ಇಟ್ಟು ಚೆನ್ನಾಗಿ ನಿರ್ಮಾ ಅಥವಾ ಸಾಬೂನಿನಿಂದ ಒಗೆದು ಸೂರ್ಯನ ಶಾಖಕ್ಕೆ ಓಣಗಿಸಬೇಕು. ಇಲ್ಲದಿದ್ದರೆ ಅನಾರೋಗ್ಯದಿಂದ ಬಳಲುವ ಪರಿಸ್ಥಿತಿ ಎದುರಾಗುತ್ತದೆ. ಎಂದು ತಿಳಿಹೇಳಿದರು.

ಮುಂದುವರೆದು ಕಾರ್ಯಕ್ರಮದ ಇನ್ನೊಂದು ಅಂಗವಾಗಿ ಬಸವ ನಗರದ ಬಡಾವಣೆಯ ಮನೆ ಮನೆಗೂ ತೆರಳಿ ಸ್ಯಾನಿಟರಿ ಪ್ಯಾಡ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. ಇದರಿಂದ ಸ್ಪೂರ್ತಿಗೊಂಡ ಮಹಿಳೆಯರು ಇನ್ನೂ ಮೇಲೆ ನಾವು ಸ್ಯಾನಿಟರಿ ಪ್ಯಾಡಗಳನ್ನು ಬಳಸುತ್ತೇವೆ ಎಂದು ಭರವಸೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾದ ಜ್ಯೋತಿ ಬೆಲ್ಸೂರೆ ಮಾತನಾಡುತ್ತಾ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಮಹಿಳೆಯರು ಬಳಸಿದ್ದೇ ಆದರೆ ಶೇ. 90 ರಷ್ಟು ಸೋಂಕುಗಳು ಬರುವುದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದಲ್ಲದೇ ನಮ್ಮ ಕುಟುಂಬದ ಆಸ್ಪತ್ರೆ ವೆಚ್ಚ ಕೂಡ ಉಳಿಸಬಹುದು. ಅಲ್ಲದೇ ನಾವು ಆರ್ಥಿಕವಾಗಿ ಸಧೃಢರಾಗಲು ಸಾಧ್ಯ. ನಾವು ಇಂದು ಸ್ಯಾನಿಟರಿ ಪ್ಯಾಡಗಳನ್ನು ಖರೀದಿ ಮಾಡುವ ಬಗ್ಗೆ ಜಿಪುಣತೆ ತೋರಿಸಿದರೆ ಮುಂದೊಂದು ದಿನ ಆಸ್ಪತ್ರೆಗಳಿಗೆ ಅಲೆದಾಡಿ ಲಕ್ಷಾಂತರ ರೂಪಾಯಿ ಆಸ್ಪತ್ರೆ ಬಿಲ್ಲು ಭರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಡಾವಣೆಯ ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 70 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು.