ಮಹಿಳೆಯರು ಸ್ವಉದ್ಯೋಗ ಪ್ರಾರಂಭಿಸುವ ನಿಟ್ಟಿನಲ್ಲಿ ಸದುಪಯೋಗ ಪಡೆದುಕೊಳ್ಳಬೇಕು :ಡಾ. ನಟರಾಜ ದುರ್ಗಣ್ಣವರ

ವಿಜಯಪುರ, ಸೆ.6-ವಿಶ್ವವಿದ್ಯಾನಿಲಯದ ಅನನ್ಯ ಆಹಾರ ಸಂಸ್ಕರಣೆ ಮತ್ತು ತರಬೇತಿ ಕೇಂದ್ರದಿಂದ ವಿವಿಧ ಆಹಾರೋತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಕುರಿತು ತರಬೇತಿಯನ್ನು ನೀಡುತ್ತಿದ್ದು ಮಹಿಳೆಯರು ಸ್ವಉದ್ಯೋಗವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಕಾರ್ಯಕ್ರಮದ ಕುರಿತಾಗಿ ಆಹಾರ ಮತ್ತು ಪೌಷ್ಠಿಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಟರಾಜ ದುರ್ಗಣ್ಣವರ ಮಾತನಾಡಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದ ವತಿಯಿಂದ ತೊರವಿ ತಾಂಡಾ, ವಿಜಯಪುರದಲ್ಲಿ ರಾಷ್ಟ್ರೀಯ ಪೋಷಣಾ ಮಾಸ-2022ರ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಜೊತೆಗೆ ವಿಶ್ವವಿದ್ಯಾನಿಲಯದ ಅನನ್ಯ ಆಹಾರ ಸಂಸ್ಕರಣಾ ಮತ್ತು ತರಬೇತಿ ಕೇಂದದಿಂದ ತಯಾರಿಸಲಾದ ಪೌಷ್ಟಿಕ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟವನ್ನು ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿಶ್ವವಿದ್ಯಾನಿಲಯದ ಮಾನ್ಯ ಕುಲಸಚಿವರಾದ ಪ್ರೋ. ಎಸ್. ವಿ. ನಾವಿಯವರು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿ ಮಾರಾಟಕ್ಕೆ ಚಾಲನೆ ನೀಡಿದರು.

ದಿನನಿತ್ಯದ ಆಹಾರಕ್ರಮದಲ್ಲಿ ಸಮತೋಲನ ಆಹಾರ ಸೇವನೆಯ ಮಹತ್ವ ಹಾಗೂ ಅಸಮತೋಲನ ಆಹಾರದಿಂದ ಮಹಿಳೆಯರು ಹಾಗೂ ಮಕ್ಕಳಲ್ಲಿ ಉಂಟಾಗುವ ದುಷ್ಪರಿಣಾಮಗಳ ಕುರಿತು ಸವಿವರವಾಗಿ ಸಹಾಯಕ ಪ್ರಾಧ್ಯಾಪಕಿ ಡಾ. ಸವಿತಾ ಹುಲಮನಿ ಹೇಳಿದರು

ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಮೇಟಿ ಮಾತನಾಡಿ, ದೈನಂದಿನ ಊಟದಲ್ಲಿ ಎಲ್ಲ ಆಹಾರ ಗುಂಪುಗಳ ಸಮಪ್ರಮಾಣದ ಸೇವನೆ ಉತ್ತಮ ಆರೋಗ್ಯದ ಲಕ್ಷಣಗಳು ಹಾಗೂ ಅವುಗಳ ಪಾಲನೆ ನಮ್ಮ ಬದುಕಿನಲ್ಲಿ ನಿರಂತರವಾಗಿರಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ತೊರವಿ ತಾಂಡಾದ ಅಧ್ಯಕ್ಷರು, ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.