ಮಹಿಳೆಯರು ಸ್ವಂತ ಉದ್ಯಮ ಕಟ್ಟುವ ಕೌಶಲ್ಯ ಬೆಳೆಸಿಕೊಳ್ಳಿ

ಕೋಲಾರ, ಜು.೩೧ – ಅನ್ನದಾತರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು. ಮಹಿಳೆಯರು ಸ್ವಂತ ಉದ್ಯಮವನ್ನು ಕಟ್ಟುವಂತಹ ಕೌಶಲ್ಯವನ್ನು ಬೆಳೆಸಿಕೊಂಡು ಆನ್‌ಲೈನ್ ವ್ಯವಹಾರ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಗ್ರಾಮ ವಿಕಾಸ ಸಂಸ್ಥೆಯ ನಿರ್ದೇಶಕ ಎಂ.ವಿ.ಎನ್. ರಾವ್ ರವರು ತಿಳಿಸಿದರು.
ತಾಲ್ಲೂಕು ವಡಗೂರು ಗ್ರಾಮದ ಯೋಗ ಮಂದಿರದಲ್ಲಿ ಸೆಲ್ಕೊ ಫೌಂಡೇಷನ್, ಗ್ರಾಮ ವಿಕಾಸ, ಬುದ್ದ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕ್ಯಾನ್ ನೆಟರ್ವಕ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಲೂಗಡ್ಡೆ ಮತ್ತು ಟೊಮೋಟೊ ಕಟಾವಿನ ನಂತರ ಬೆಳೆ ಹಾನಿಯ ನಿರ್ವಹಣೆ, ಜಾಗೃತಿ ತರಬೇತಿ ಮತ್ತು ಸಾಮರ್ಥ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತ್ತೂರು ಗ್ರಾಮ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಹರೀಶ್ ಕುಮಾರ್ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆಗಳಾದ ಕಿರು ಉದ್ಯಮಗಳ ಉತ್ತೇಜನ ಯೋಜನೆ, ಕೃಷಿ ಭಾಗ್ಯ ಯೋಜನೆ, ಅಟಲ್ ಭೂ ಜಲ ಯೋಜನೆ, ಯಾಂತ್ರೀಕರಣ, ಹನಿ ನೀರಾವರಿ, ಪಿ.ಎಂ. ಕಿಸಾನ್ ಯೋಜನೆ, ನರೇಗಾ, ಸಿರಿಧಾನ್ಯಗಳ ಕುರಿತು ಮಾಹಿತಿ ನೀಡಿದರು.
ಸೆಲ್ಕೊ ಫೌಂಡೇಷನ್ ತಾಂತ್ರಿಕ ಸಹಾಯಕ ಮಹೇಶ್ ಮಾತನಾಡಿ ಸೆಲ್ಕೋ ಫೌಂಡೇಷನ್‌ನಿಂದ ಸಿಗುವ ಸೌಲಭ್ಯಗಳಾದ ಸಬ್ಸೀಡಿ ಸಾಲಗಳು, ಕೃಷಿ ಯಂತ್ರೋಪಕರಣಗಳು, ಎಲ್ಲಾ ಅನುಕೂಲಗಳನ್ನು ರೈತರು, ಮಹಿಳೆಯರು ಮತ್ತು ಎಸ್.ಎಸ್.ಜಿ. ಸಂಘದ ಸದಸ್ಯರು ಸದುಪಯೋಗಪಸಿಕೊಂಡು ಸ್ವಾವಲಂಭಿಗಳಾಗಲು ತಿಳಿಸಿದರು.
ಗ್ರಾಮ ವಿಕಾಸ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರಾಮಕೃಷ್ಣೇಗೌಡ ಮಾತನಾಡಿ ಸೆಲ್ಕೋ ಫೌಂಡೇಷನ್ ಸಂಸ್ಥೆಯವರು ಸೌರಶಕ್ತಿಯಿಂದ ಕೃಷಿಗೆ ಅನುಕೂಲವಾಗುವ ಯಂತ್ರಗಳನ್ನು ತಯಾರಿಸಿ ರೈತರ ಅನುಕೂಲಕ್ಕಾಗಿ ಅವಕಾಶಗಳನ್ನು ಕಲ್ಪಿಸಿದ್ದಾರೆ. ಈ ಯಂತ್ರಗಳ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಲು ಮತ್ತು ಸಹಕಾರ ಸಂಘಗಳು ಹಾಗೂ ಯುವ ಜನತೆಯು ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಸ್ವಾವಲಂಬಿ ಜೀವನ ನಡೆಸಲು ತಿಳಿಸಿದರು.