ಮಹಿಳೆಯರು ಸ್ಥಿರ ಸ್ಥಾನಮಾನಗಳಿಗಾಗಿ ದೃಢ ಸಂಕಲ್ಪಿತರಾಗಬೇಕು: ಸಜ್ಜನರ

ಶಿರಹಟ್ಟಿ,ಮಾ13: ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಂಡು ಕುಟುಂಬಗಳ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸÀಬೇಕು ಜೊತೆಗೆ ಸಮಾಜದ ಎಲ್ಲ ಸ್ಥಿರ ಸ್ಥಾನಮಾನಗಳನ್ನು ಹೊಂದುವುದಕ್ಕಾಗಿ ದೃಢ ಸಂಕಲ್ಪಿತರಾಗಬೇಕೆಂದು ಬೆಳ್ಳಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನೇತ್ರಾ ಸಜ್ಜನರ ಹೇಳಿದರು.
ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಪರಿವರ್ತನಾ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರದಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗಬಾರದು. ಮಹಿಳೆಯರ ಮೇಲೆ ಸಮಾಜದಲ್ಲಿ ಸಾಕಷ್ಟು ಹೊಣೆಗಾರಿಕೆಯಿದೆ. ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿಯಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತ ಸಂದರ್ಭದಲ್ಲಿ ಬದುಕು ಉತ್ತಮವಾಗಿದೆ. ಗುಡಿಕೈಗಾರಿಕೆಗಳ ಮೂಲಕ ಮಹಿಳೆಯರು ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ, ಇದು ಶ್ಲಾಘನೀಯ ಕಾರ್ಯ. ಮುಖ್ಯವಾಗಿ ವೃಥಾ ಕಾಲಹರಣ ಮಾಡುವುದನ್ನು ಬಿಟ್ಟು ಪ್ರಗತಿಗಾಗಿ ಚಿಂತನೆ ಮಾಡಬೇಕು, ಹೆಣ್ಣು ಜ್ಞಾನವಂತರಾದರೆ ಕುಟುಂಬ ಉತ್ತಮವಾಗಿ ನಡೆಯಲಿದೆ. ಪರಿವರ್ತನಾ ತರಬೇತಿ ಕೇಂದ್ರ ನೀಡುತ್ತಿರುವ ಉಚಿತ ತರಬೇತಿಗಳನ್ನು ಸದುಪಯೋಗ ಪಡಿಸಿಕೊಂಡು ಜೀವನವನ್ನು ಉಜ್ವಲವಾಗಿಸಿಕೊಳ್ಳಿ ಎಂದರು.
ಪ್ರತಿ ಕ್ಷೇತ್ರಗಳಲ್ಲಿ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ. ಪುರುಷರಿಗಿಂತ ತಾವೇನು ಕಡಿಮೆಯಿಲ್ಲ ಎಂಬುದನ್ನು ನಿರೂಪಿಸುತ್ತಿದ್ದಾರೆ. ದೇಶದಲ್ಲಿ ಇಂದು ಬಹುತೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಮಹಿಳೆಯರೇ ಮುಖ್ಯಸ್ಥರಾಗಿದ್ದಾರೆ. ಕಂಪನಿಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಮಹಿಳೆಯರ ನಿಪುಣತೆಗೆ ಮತ್ತು ಪ್ರಾಮಾಣಿಕತೆಗೆ ಇದು ಉತ್ತಮ ನಿದರ್ಶನ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಲಿಂಗಯ್ಯ ಹೊಂಬಾಳಿ ಮಠ, ಪ್ರಮುಖರಾದ ಬಸವರಾಜ ಗಡ್ಡಿ, ಪರಿವರ್ತನ ಸಂಸ್ಥೆಯ ಅಧ್ಯಕ್ಷ ಶಶಿಧರ ಶಿರಸಂಗಿ, ಕಾರ್ಯದರ್ಶಿ ಪ್ರದೀಪ ಗೊಡಚಪ್ಪನವರ, ಕೋಶ್ಯಾಧ್ಯಕ್ಷರಾದ ಪ್ರಕಾಶ ಮೇಟಿ, ನಿರ್ದೇಶಕ ಸಿದ್ದಪ್ಪ ಹೂಗಾರ, ದೇವಪ್ಪ ಬಾಳೋಜಿ, ಶಿಕ್ಷಕಿಯರಾದ ಸುಜಾತ ದೊಡ್ಡೂರ, ಜಯಶ್ರೀ ಕಮ್ಮಾರ, ಸುಜಾತ ಪವಾರ ಹಾಗೂ 60 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.