ಮಹಿಳೆಯರು ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಿದ್ದು ಅಂಬೇಡ್ಕರ್

ರಾಯಚೂರು,ಮಾ.೦೫- ದೇಶದಲ್ಲಿ ಶಿಕ್ಷಣ, ಸಮಾನತೆ, ಸ್ವಾತಂತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಮತ್ತು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಸಂವಿಧಾನ ಬರೆದು ಅವಕಾಶ ಕಲ್ಪಿಸಿಕೊಟ್ಟವರು, ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ್ ಪೋತೆದಾರ ಅಭಿಪ್ರಾಯಪಟ್ಟರು.
ನಗರದ ೦೬ನೇ ವಾರ್ಡ್ ಹೊಸೂರು ಗ್ರಾಮದ ಸ್ನೇಹಲತಾ – ಹುಲಿಗೆಪ್ಪ ಜಗ್ಲಿ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, ೫೪ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಂತರ ಮುಖ್ಯಭಾಷಣಕಾರರಾಗಿ ಬೌದ್ಧಧಮ್ಮ ಉಪಾಸಕ ಷಣ್ಮುಖಪ್ಪ ಸಿರವಾರ ಮಾತನಾಡಿ, ಪ್ರಾಚೀನ ಭಾರತದಲ್ಲಿ ಮಹಿಳೆಯರನ್ನು ಶೂದ್ರರೆಂದು, ಶೂದ್ರರನ್ನು ಮತ್ತು ಪಂಚಮರನ್ನು ಶಿಕ್ಷಣದಿಂದ ದೇವರು ಮತ್ತು ಧರ್ಮದಿಂದ, ಅಧಿಕಾರದಿಂದ ದೂರವಿಟ್ಟು ಶೋಷಣೆ ಮಾಡಿದ ಇತಿಹಾಸವನ್ನು ಮುಚ್ಚಿಟ್ಟಿದ್ದ ಸತ್ಯವನ್ನು, ಬಿಚ್ಚಿಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳಿದರು.
ನಮ್ಮನ್ನಾಳಿದ ಬ್ರಿಟೀಷರಿಗೆ ದೇಶದಲ್ಲಿರುವ ಸಾಮಾಜಿಕ ವ್ಯವಸ್ಥೆ, ಧರ್ಮ, ಜಾತಿಯ ನಿಜರೂಪ ವಾಸ್ತವವನ್ನು ತಿಳಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ರವರು, ಮೊಟ್ಟಮೊದಲು ಮೂಕನಾಯಕ ಎಂಬ ಪತ್ರಿಕೆ ಪ್ರಾರಂಭಿಸಿದರು. ಆ ಮೂಲಕ ಬ್ರಿಟೀಷರನ್ನು ಮತ್ತು ಶೋಷಿತರನ್ನು ಎಚ್ಚರಿಸಿದರು ಎಂದರು.
ಕಾರ್ಯಕ್ರಮದಲ್ಲಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಮಹಾಪೋಷಕ ಎಂ.ಆರ್.ಭೇರಿ ಮಾತನಾಡಿದರು. ಡಾ.ರಾಜ್ ಕುಮಾರ್ ಅಭಿಮಾನಿ ಹುಲಿಗೆಪ್ಪ ಜಗ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಶಿಕ್ಷಕ ಕೆ. ಶಿವಪ್ಪ ನಾಯಕ ಕಲ್ಲೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಬುಜ್ಜಮ್ಮ ಶಂಕರಪ್ಪ ಹೊಸೂರು, ವಕೀಲರಾದ ಭೀಮಪ್ಪ ಹೊಸೂರು, ಹಿರಿಯ ಸಾಹಿತಿಗಳಾದ ಆಂಜಿನೇಯ್ಯ ಜಾಲಿಬೆಂಚಿ, ವಿವೇಕ್ ಹೊಸೂರು, ಶಿಕ್ಷಕರಾದ ಫಾಲಾಕ್ಷ ಕಲ್ಲೂರು, ವಿಜಯ್ ಕುಮಾರ ಕಲ್ಲೂರು, ಜಯಸಿಂಹ ಕಲ್ಲೂರು ಸೇರಿದಂತೆ ಮಹಿಳೆಯರು,ಯುವಕರು, ಮಕ್ಕಳು ಭಾಗವಹಿಸಿದ್ದರು.