ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯೋಣ : ಡಿವೈಎಸ್‍ಪಿ ಸುರೇಶ್

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಫೆ.೨೨; ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವಲ್ಲಿ ಎಲ್ಲ ಭಾಗೀದಾರ ಇಲಾಖೆಗಳು ಕಾಯ್ದೆಯನ್ನು ಸಮರ್ಪಕವಾಗಿ ಅರಿತು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಡಿವೈಎಸ್‍ಪಿ ಸುರೇಶ್ ಹೇಳಿದರು.ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಭಾಗೀದಾರ ಇಲಾಖೆಗಳ ಸಹಯೋಗದಲ್ಲಿ ಇಂದು ಆಲ್ಕೊಳದ ಚೈತನ್ಯ ಇಲ್ಲಿ ಕ್ಷೇತ್ರ ಮಟ್ಟದ ವಿವಿಧ ಇಲಾಖೆಯ ಭಾಗೀದಾರರಿಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದ್ದು, ಪೊಲೀಸ್ ಠಾಣೆಗಳಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳನ್ನು ಈ ಮೋಸದ ಬಲೆಯಿಂದ ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ.ಜಿಲ್ಲೆಯಲ್ಲಿ ಸ್ಪಾ/ಸಲೂನ್‍ಗಳ ಬಗ್ಗೆ ದೂರುಗಳು ಬರುತ್ತಿದ್ದು, ಕಾಯ್ದೆ ಅನುಷ್ಟಾನ ವೇಳೆ ಯಾರನ್ನು ಆರೋಪಿಗಳೆಂದು, ಸಂತ್ರಸ್ತರೆಂದು ಪರಿಗಣಿಸಬೇಕು ಹೀಗೆ ಕೆಲ ಗೊಂದಲಗಳು ಎದುರಾಗುತ್ತವೆ. ಆದ್ದರಿಂದ ಎಲ್ಲರೂ ಕಾಯ್ದೆಯನ್ನು ಸಮರ್ಪಕವಾಗಿ ಅರಿತು ಎಷ್ಟೇ ಸವಾಲುಗಳಿದ್ದರೂ ಅದನ್ನು ಎದುರಿಸಿ, ಮಹಿಳೆಯರು ಮತ್ತು ಮಕ್ಕಳನ್ನು ಅನಾಹುತಗಳಿಂದ ರಕ್ಷಿಸಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯ, ಅಪರಾಧಗಳು ನಡೆಯುತ್ತಿರುವ ಕಾರಣ ಇವರ ಕುರಿತಾಗಿ ಅತಿ ಹೆಚ್ಚು ಕಾಯ್ದೆ-ಕಾನೂನುಗಳಿವೆ. ಎಲ್ಲ ಭಾಗೀದಾರ ಇಲಾಖೆಗಳ ತಳಮಟ್ಟದಿಂದ ಉನ್ನತ ಮಟ್ಟದ ಅಧಿಕಾರಿಗಳವರೆಗೆ ಈ ಕಾಯ್ದೆಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ.ಇತ್ತೀಚಿನ ಬಹಳ ಆತಂಕಕಾರಿ ವಿಷಯವೆಂದರೆ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ಮಾತುಕತೆ ಕಡಿಮೆಯಾಗುತ್ತಿದೆ. ಪೋಷಕರು ಒತ್ತಡದ ಕೆಲಸದಲ್ಲಿದ್ದರೆ ಮಕ್ಕಳು ಮೊಬೈಲ್, ಸೋಷಿಯಲ್ ಮೀಡಿಯಾ, ಗೆಳೆಯರೊಂದಿಗೆ ಇರುತ್ತಾರೆ. ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಸಣ್ಣಪುಟ್ಟ ವಿಷಯಗಳಿಗೂ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಖಿನ್ನತೆಯೂ ಹೆಚ್ಚುತ್ತಿದೆ.ಜೀತ, ಕೃಷಿ, ಕಾರ್ಖಾನೆ ಕೆಲಸ, ಅಂಗಾಂಗ ಮಾರಾಟ, ಒಳ ಹಾಗೂ ಹೊರದೇಶಗಳಲ್ಲಿ ದತ್ತು, ಲೈಂಗಿಕ ಚಟುವಟಿಕೆ, ಭಿಕ್ಷಾಟನೆ, ಮಾದಕ ವಸ್ತು ಸಾಗಾಣಿಕೆ, ಕಳ್ಳ ಸಾಗಾಣಿಕೆ, ಸೂಕ್ಷ್ಮ ಕೆಲಸಗಳು, ಮದುವೆ ವಿಚಾರ, ಬಾರ್‍ನಲ್ಲಿ ನೃತ್ಯ ಹೀಗೆ ಹಲವಾರು ಕಾರಣಗಳಿಗೆ ಮಹಿಳೆಯರ, ಮಕ್ಕಳ ಅನೈತಿಕ ಸಾಗಣಿಕೆ ಹೆಚ್ಚುತ್ತಿದೆ. ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳ ಅನೈತಿಕ ಸಾಗಾಣಿಕ ಸಹ ಅಧಿಕವಾಗುತ್ತಿದ್ದು, ಇದನ್ನು ತಡೆಯುವುದು ನಮ್ಮೆಲ್ಲರ ಹೊಣೆಯಾಗಿದೆ.ಸಾಗಾಣಿಕೆಯನ್ನು ನೆರೆಹೊರೆಯವರು, ಶಾಲಾ ಶಿಕ್ಷಕರು, ಭಾಗೀದಾರ ಇಲಾಖೆಯವರು, ಪೊಲೀಸ್, ಪಂಚಾಯ್ತಿ, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ಸಮುದಾಯದ ಪ್ರತಿಯೊಬ್ಬರು ತಡೆಯಬಹುದಾಗಿದೆ ಎಂದರು.