ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಜಿಲ್ಲೆಯಲ್ಲಿ ಮೂಲೋತ್ಪಾಟನೆಯಾಗಲಿ: ರಾಮಚಂದ್ರನ್ ಆರ್

ಬೀದರ ನ. 22: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೀದರ ಜಿಲ್ಲೆಯಲ್ಲಿ ಇರುವುದಿಲ್ಲ ಎನ್ನುವ ಹಾಗೆ ದೌರ್ಜನ್ಯದ ಮೂಲೋತ್ಪಾಟನೆಗೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಣಗದಲ್ಲಿ ನವೆಂಬರ್ 20ರಂದು ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ನಡೆಯುವ ವಿವಿಧ ಕಾರ್ಯಕ್ರಮಗಳು ಮತ್ತು ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌಜ್ಯನ್ಯ ಪ್ರಕರಣಗಳು ಕಂಡು ಬಂದಲ್ಲಿ ವಿಳಂಬ ಮಾಡದೇ ತಪ್ಪಿತಸ್ಥರ ಮೇಲೆ ಕಾನೂನುರಿತ್ಯ ಕಠಿಣ ಕ್ರಮವಹಿಸಬೇಕು. ಬಾಲಕಾರ್ಮಿಕರು ಕಂಡು ಬರುವ ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ ಪ್ರಕರಣ ದಾಖಲಿಸಿ, ದಂಡಿ ವಿದಿಸಿ ಎಚ್ಚರಿಕೆ ನೀಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಣ್ಣು ಭ್ರೂಣ ಹತ್ಯೆ ಅಪರಾಧವಾಗಿದೆ. ಇದು ಕಾನೂನುಬಾಹೀರ ಎಂದು ತಿಳಿದಿದ್ದರೂ ಯಾರಾದರು ಸ್ಯಾನಿಂಗ್ ಸೆಂಟರ್‍ಗಳಲ್ಲಿ ಲಿಂಗಪತ್ತೆ ನಡೆಸುವುದು ಕಂಡುಬಂದಲ್ಲಿ ಅಂತವರ ಮೇಲೆ ಕೂಡ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಮಾತನಾಡಿ, ಕೆಲವೊಂದು ತಾಲೂಕೂಗಳಲ್ಲಿ ಚಿಂದಿ ಆಯುವ ಹಾಗೂ ಭಿಕ್ಷೆ ಬೇಡುವ ಮಕ್ಕಳು ಹೆಚ್ಚಿನ ರೀತಿಯಲ್ಲಿ ಕಂಡು ಬರುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿಗಳು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ನಾವುಗಳು ಲಾಕ್ಡೌನ್‍ನ ಅವಧಿಯಲ್ಲಿ ಬೀದರ ನಗರಾದ್ಯಂತ ವಿವಿಧೆಡೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಸ್ಥಳೀಯ ಸಂಸ್ಥೆಗಳ ಮೂಲಕ ವ್ಯಾಪಕ ಪ್ರಚಾರ ನಡೆಸಿ, ಜನರಲ್ಲಿ ಅರಿವು ಮೂಡಿಸಿ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪರತಾಪೂರೆ ಅವರು ತಿಳಿಸಿದರು.
ಸದಸ್ಯರಿಂದ ಸಲಹೆ: ಜಿಲ್ಲಾ ಮಕ್ಕಳ ಸಹಾಯವಾಣಿ ಸಲಹಾ ಮಂಡಳಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಬಾಲ್ಯವಿವಾಹ ತಡೆಗಟ್ಟುವ ಸಮನ್ವಯ ಸಮಿತಿ, ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಮಿತಿ, ಜಿಲ್ಲಾ ತನಿಖಾ ಸಮಿತಿ, ಮಾತೃವಂದನಾ ಪ್ರಗತಿ ಪರಿಶೀಲನಾ ಸಮಿತಿ, ಪೋಷಣಾ ಅಭಿಯಾನ ಯೋಜನೆ ಪ್ರಗತಿ ಪರಿಶೀಲನೆ, ಕೌಟುಂಬಿಕ ದೌರ್ಜನ್ಯ ತಡೆಯುವ ಸಮನ್ವಯ ಸಮಿತಿ ಹಾಗೂ ದಮನಿತ ಮಹಿಳೆಯರ ಯೋಜನೆಗಳ ಅನುಷ್ಠಾನ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಸಭೆಯಲ್ಲಿ ಹಾಜರಿದ್ದು, ಸಭೆಗೆ ಕೆಲವು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರರಾದ ಗಂಗಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ತಿಪ್ಪಣ್ಣ ಪಿ.ಸಿರಸಗಿ, ತಾಲೂಕುಗಳ ಮಕ್ಕಳ ಸುರಕ್ಷಣಾಧಿಕಾರಿಗಳು, ಅಂಗನವಾಡಿ ಸೂಪರವೈಸರ್‍ಗಳು, ವಿವಿಧ ಸಮಿತಿ ಸದಸ್ಯರು ಹಾಗೂ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಚೈಲ್ಡ್‍ಲೈನ್ 1098 ವಾರ್ಷಿಕ ವರದಿ ಬಿಡುಗಡೆ: ಸುಮಾರು 10 ವರ್ಷಗಳಿಂದ ಮಕ್ಕಳ ವಿಚಾರವಾಗಿ ಪ್ರಚಾರ ಕಾರ್ಯಕ್ರಮಗಳನ್ನು ಮಾಡುತ್ತ ಮಕ್ಕಳ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿರುವ ಚೈಲ್ಡ್‍ಲೈನ್-1098 ಇವರು ಪ್ರಕಟಿಸಿದ ವಾರ್ಷಿಕ ವರದಿ 2019-2020 ಪುಸ್ತಕವನ್ನು ಇದೆ ವೇಳೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ದತ್ತು ಕಾರ್ಯಕ್ರಮ ಕರಪತ್ರ ವಿತರಣೆ: ಯಾವ ಮಕ್ಕಳುಗಳು ದತ್ತಕ್ಕೆ ಅರ್ಹರು? ಯಾರು ಮಕ್ಕಳನ್ನು ದತ್ತು ಪಡೆಯಲು ಅರ್ಹರು ? ಎನ್ನುವ ಹಲವಾರು ಮಾಹಿತಿ ಹೊಂದಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಕರಡ್ಯಾಳ ಭಾಲ್ಕಿ ಇವರು ಪ್ರಕಟಿಸಿದ ದತ್ತು ಕಾರ್ಯಕ್ರಮ ಕರಪತ್ರವನ್ನು ಸಭೆಯಲ್ಲಿ ವಿತರಿಸಲಾಯಿತು.