ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು

ರಾಯಚೂರು,ಮಾ.೯- ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಎಸ್ ಸಿಎಬಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎ.ಎಂ ಮಲ್ಲಿಕಾರ್ಜುನಯ್ಯ ಸಲಹೆ ನೀಡಿದರು.
ನಗರದ ಎಸ್ ಸಿಎಬಿ ಕಾಲೇಜಿನ ಶಕ್ತಿ ವುಮನ್ಸ್ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಅಬಲೆಯಲ್ಲ ಸಬಲೆ. ಪುರುಷರಂತೆ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ಕಾಲದಂತೆ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆಗೆ ಸೀಮಿತರಾಗಿಲ್ಲ, ಶಿಕ್ಷಣ, ಆರೋಗ್ಯ, ವೈದ್ಯಕೀಯ, ರಾಜಕೀಯ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗಟ್ಟಲು ಕಾನೂನಿನಲ್ಲಿ ರಕ್ಷಣೆ ನೀಡಲಾಗಿದೆ. ಮಹಿಳೆಯರು ತಮ್ಮ ಹಕ್ಕುಗಳು ಹಾಗೂ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಗೋಪಿನಾಥ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಅನೇಕ ಸವಾಲುಗಳು ಎದುರಾಗುತ್ತವೆ. ಸವಾಲುಗಳನ್ನು ಎದುರಿಸಿದಾಗ ಯಶಸ್ವಿಯಾಗಲು ಸಾಧ್ಯ. ತಾಳ್ಮೆ, ಸಹನೆಯ ಜೊತೆಗೆ ಸವಾಲುಗಳನ್ನು ಸ್ವೀಕರಿಸಿ ಪರಿಸ್ಥಿತಿಗಳನ್ನು ಎದುರಿಸಿ ಕೀಳರಿಮೆಯಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಹಿಳಾ ದಿನಾಚಣೆಯ ಕುರಿತು ಭಾಷಣ ಮಾಡಿದರು. ಈ ವೇಳೆ ಸಹಾಯಕ ಪ್ರಾಧ್ಯಾಪಕ ನಾರಾಯಣಸ್ವಾಮಿ, ಉಮಾ ರಾಮು ಹಾಗೂ ಕಾಲೇಜಿನ ಸಿಬ್ಬಂದಿ ಇದ್ದರು.