ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಚಿತ್ರದುರ್ಗ. ಮಾ.೩೦: ಕ್ಷಯ ರೋಗ ಹೆಣ್ಣು ಮಕ್ಕಳಲ್ಲೂ ಸಹ ಕಂಡು ಬರುತ್ತಿದೆ, ಮಹಿಳೆಯರು ಕೆಮ್ಮು, ಕಫ ಹೆಚ್ಚಾದಾಗ ತಕ್ಷಣ ವೈದ್ಯರನ್ನು ಕಾಣಬೇಕು, ಕ್ಷಯ ರೋಗ ಗೊತ್ತಿಲ್ಲದಂತೆ ಹರಡುತ್ತಿದೆ, ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು, ಹೆಣ್ಣು ಮಕ್ಕಳು ಕಾಯಿಲೆ ಬಂದಾಗ ಸಹಿಸಿಕೊಂಡು, ಕೊನೆಯ ಘಟ್ಟದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ, ಸರ್ಕಾರ ಒದಗಿಸುವ ಉಚಿತ ಆರೋಗ್ಯ ಯೋಜನೆಗಳನ್ನು ಬಳಸಿಕೊಳ್ಳಬೇಕು, ಯುವ ಜನಾಂಗದ ಜಾಗೃತಿಗೊಳಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು. ಮಹಿಳೆಯರು ಉತ್ತಮ ಆರೋಗ್ಯ ನಿರ್ಮಿಸಿಕೊಂಡು ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಸಿ.ಓ. ಸುಧಾ ತಿಳಿಸಿದರು. ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರೂಪಶ್ರೀ.ಎಂ ಮಾತನಾಡುತ್ತಾ  ಹೆಣ್ಣು ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮಾಡಿಸಬೇಕು, ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಬಾರದು, ಯಾವುದೇ ಕಾಯಿಲೆಗಳಾದಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು, ಮಹಿಳೆಯರಿಗೆ ಬಹಳಷ್ಟು ಕಾಯಿಲೆಗಳು ತಿಳಿದಿರುವುದೇ ಇಲ್ಲ, ಕ್ಯಾನ್ಸರ್ ಅಂತ ಕಾಯಿಲೆಗಳು, ಮಕ್ಕಳಾಗದೆ ಇರುವಂತಹ ಕಾಯಿಲೆಗಳು, ಋತು ಸಮಸ್ಯೆಗಳು ಇವೆಲ್ಲವನ್ನು ಸಹ ಅರಿವು ಮೂಡಿಸುವ ಮುಖಾಂತರ ಹೆಣ್ಣು ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬಹುದು. ಆರೋಗ್ಯವಂತ ಹೆಣ್ಣು ಮಕ್ಕಳು ದೇಶದ ಬಂಡವಾಳ, ತವರುಮನೆ ಮತ್ತು ಗಂಡನ ಮನೆ ಎರಡನ್ನು ನಿಭಾಯಿಸಬೇಕು,  ಹೆಣ್ಣು ಮನಸ್ಸು ಮಾಡಿದರೆ ಒಳ್ಳೆಯ ಕೆಲಸಗಳನ್ನು ಮಾಡಬಹುದು ಕೆಟ್ಟದ್ದನ್ನು ಮಾಡಬಹುದು,  ಹೆಣ್ಣಿಗೆ ಅಷ್ಟೊಂದು ಶಕ್ತಿ ಇರುತ್ತದೆ,    ಹಾಗಾಗಿ ಹೆಣ್ಣು ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಿ ದೇಶ ಕಟ್ಟು ವ ಕೆಲಸದಲ್ಲಿ ಮುಂದಾಗಬೇಕು ಎಂದರು.