ಮಹಿಳೆಯರು ಕೊರೋನ ನಿಯಂತ್ರಿಸಲು ಸಹಕರಿಸಬೇಕು

ದಾವಣಗೆರೆ.ಮೇ.೪; ಹೊರಗಡೆ ಸುತ್ತಾಡುತ್ತಿರುವರನ್ನ ಮನೆಯಲ್ಲಿರಿಸಿ ಮಹಿಳೆಯರು ಕೊರೋನ ನಿಯಂತ್ರಣಕ್ಕೆ ಸಹಾಯ ಮಾಡಬೇಕು. ಅದಕ್ಕೆ ಮನೆಯಲ್ಲಿರುವ ಮಹಿಳೆಯರೇ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ. ಅವರು ಕುಟುಂಬದ ಸದಸ್ಯರನ್ನು ಜಾಗೃತಗೊಳಿಸಿ, ಅನಾವಶ್ಯಕವಾಗಿ ಹೊರಗೆ ಸುತ್ತಾಡದಂತೆ ಮಾಡಿ, ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಲಿಸುವ ಕೆಲಸ ಶೀಘ್ರವಾಗಿ ಮಾಡಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿಯವರು ನುಡಿದರು. ಅವರು ನಗರದ ಮಹಾವೀರ ನಗರದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಮಹಾವೀರ ನಗರದ ನಿವಾಸಿಗಳ ಸಹಯೋಗದೊಂದಿಗೆ ಮಹಿಳೆಯರೇ ಜಾಗೃತರಾಗಿ ಎಂಬ ಮಹಿಳೆಯರನ್ನು ಜಾಗೃತಗೊಳಿಸುವ ಭಿತ್ತಿಪತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ನಿಗ್ರಹಿಸುವುದು ಬಹಳ ಸುಲಭ. ಜನರ ಓಡಾಟವನ್ನ ನಿಯಂತ್ರಿಸಬೇಕು, ಅನಾವಶ್ಯಕವಾಗಿ ಜನರು ರಸ್ತೆಗೆ ಇಳಿಯುವುದು, ಮಾಸ್ಕ್ ಇಲ್ಲದೇ ಮಾತನಾಡುವುದು, ಗುಂಪು ಸೇರಿ ಕರೋನ ಹರಡುವುದು ನಿಲ್ಲಿಸಬೇಕು. ದೇಶವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯಕ್ಕೆ ಬರಬೇಕಿದೆ. ಆದಷ್ಟು ಮಹಿಳೆಯರು ತಮ್ಮ ಕುಟುಂಬದ ಸದಸ್ಯರುಗಳನ್ನ ಮನೆಯಲ್ಲೇ ಇರಿಸಿಕೊಂಡು, ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕರಿಸಬೇಕು ಎಂದರು.ಮಹಿಳೆಯರು ಮನೆಯಲ್ಲಿರುವ ಸದಸ್ಯರುಗಳಿಗೆ ಹೊರಗೆ ಹೋಗದಂತೆ ತಡೆ ಹಿಡಿದರೆ ಜನತಾ ಕರ್ಫ್ರೂಗಳು ಯಶಸ್ವಿಯಾಗುತ್ತದೆ. ಮಹಿಳೆಯರು ಮನೆಯಲ್ಲಿರುವ ಸದಸ್ಯರುಗಳಿಗೆ ಅನಾವಶ್ಯಕವಾದ ವಸ್ತುಗಳನ್ನ ತರದಂತೆ ತಡೆದು, ಮಾರುಕಟ್ಟೆಗೆ ಮುಗಿಬೀಳುವುದನ್ನ ತಪ್ಪಿಸಬಹುದು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ಎಚ್ಚರಿಕೆ ನೀಡಿದರೆ, ಜನತಾ ಬಂದ್‌ಗಳು ಯಶಸ್ವಿಯಾಗುವವು. ಎಸ್.ಜೆ.ಎಂ. ಶಾಲೆಯ ಶಿಕ್ಷಕಿ ಮತ್ತು ಲೇಖಕಿ ಶ್ರೀಮತಿ. ಟಿ.ಎಸ್. ಪ್ರತಿಭಾರವರು ಮಾತನಾಡುತ್ತಾ ಮಕ್ಕಳು ಸಾಮಾಜಿಕ ಅಂತರವನ್ನಿಟ್ಟುಕೊಂಡು ಶಾಲೆಗಳಿಗೆ ಹೋಗೋದನ್ನ ಮನದಟ್ಟುಮಾಡಿಕೊಳ್ಳಬೇಕು. ಕರೋನ ಎರಡನೇ ಅಲೆ ತೀಷ್ಣವಾಗಿ ಹರಡುತ್ತಿದೆ. ಮಕ್ಕಳು ಕರೋನಾಗೆ ತುತ್ತಾಗದಂತೆ ತಾಯಂದಿರು ಕಾಳಜಿವಹಿಸಬೇಕು. ಸಾಮಾನ್ಯವಾಗಿ ಗಂಡಸರು ಹೊರಗಡೆ ಸುತ್ತಾಡಿ ಮನೆಗೆ ಬಂದಾಗ ಅವರ ಸ್ವಚ್ಚತೆಯ ಬಗ್ಗೆ ಮಹಿಳೆಯರೇ ಕಾಳಜಿವಹಿಸಬೇಕು, ವಾರಕ್ಕೊಮ್ಮೆ ಮಾಂಸದ ಅಡುಗೆ ಬೇಕು ಎಂದು ಮಾಂಸದ ಅಂಗಡಿ ಮುಂದೆ ಸರದಿ ಹಚ್ಚುವುದು ಮಾಡದೇ, ಬದಕನ್ನ ಸರಳತೆಗೆ ಕೊಂಡೊಯ್ಯಬೇಕು. ಮಧ್ಯಪಾನದ ನೆಪದಲ್ಲಿ ಗಂಡಸರು ಹೊರಗಡೆ ಸುತ್ತಾಡುವುದನ್ನ ಮಹಿಳೆಯರು ತಡೆಯಬೇಕು. ಈಗ ಮರಣ ಹೊಂದುತ್ತಿರುವ ಸಂಖ್ಯೆಗಳಲ್ಲಿ ಗಂಡಸರ ಸಂಖ್ಯೆ ಹೆಚ್ಚಾಗಿದೆ, ಹೆಚ್ಚು ಮಹಿಳೆಯರು ದುಃಖತಪ್ತರಾಗುತ್ತಿದ್ದಾರೆ ಎಂದರು.ಹಿರಿಯೂರಿನ ಸ.ಹಿ.ಪ್ರಾ.ಶಾ. ಶಿಕ್ಷಕಿಯಾದ ಶ್ರೀಮತಿ ಗೀತಾರವರು ಮಾತನಾಡುತ್ತಾ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಕೊರೋನ ನಿಗ್ರಹಿಸುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಹೆಚ್ಚೆಚ್ಚು ಜನ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮುಂದಾಳತ್ವ ವಹಿಸಬೇಕು. ಮಹಿಳೆಯರು ಶಿಕ್ಷಣವಂತರಾಗಬೇಕು ಮಕ್ಕಳಿಗೆ, ಕುಟುಂಬದ ಸದಸ್ಯರುಗಳಿಗೆ ಆರೋಗ್ಯ ತಿಳುವಳಿಕೆ ನೀಡಬೇಕು ಎಂದರು.ಎಚ್. ಎಸ್. ಪ್ರೇರಣಾ, ಎಚ್. ಎಸ್. ರಚನಾ ಕೊರೋನ ಗೀತೆಗಳನ್ನ ಹಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ಶಾಲೆಯ ಶ್ರೇಯ, ಎಸ್.ಆರ್.ಎಸ್‌ನ ಶಾಲೆಯ ಗ್ರೀತ, ಇಂಟರ್ ನ್ಯಾಷನಲ್ ಶಾಲೆಯ ರೀತಿಕ, ಗೃಹಿಣಿಯರಾದ ಶ್ರೀಮತಿ ಸುನಿತ, ಕೆಜೆವಿಸ್‌ನ ಜಿಲ್ಲಾ ಉಪಾಧ್ಯಕ್ಷರಾದ ಜಯದೇವ ಮೂರ್ತಿ, ಮಂಜುನಾಥ ಹಾಜರಿದ್ದರು.