ಮಹಿಳೆಯರು ಕೂಡಾ ವಿಜ್ಞಾನದಲ್ಲಿ ಅಭಿವೃದ್ಧಿ ಹೊಂದಲಿ: ಗಿರೀಶ ಕಡ್ಲೆವಾಡ

ಬೀದರ:ಮಾ.24: ವಿಜ್ಞಾನ ಕೇವಲ ವಿಜ್ಞಾನ ಶಿಕ್ಷಕರಿಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರಿಗೂ ವಿಜ್ಞಾನ ತಿಳಿಸುವಂತೆ ನಿರಂತರ ಪ್ರಯತ್ನಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷ ಗೀರೀಶ ಕಡ್ಲೆವಾಡ ನುಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರನ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ 13ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮ್ಮೇಳನದಲ್ಲಿ ಎಂಟು ಗೋಷ್ಠಿಗಳು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಮಹಿಳೆಯರು ಜಾಸ್ತಿ ಭಾಗವಹಿಸಿದ್ದು ಖುಷಿ ತಂದಿದೆ. ಈ ನಿಟ್ಟಿನಲ್ಲಿ ಪರಿಷತ್ತಿನಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ ಅಖಿಲ ಕರ್ನಾಟಕ ಮಹಿಳಾ ವಿಜ್ಞಾನ ಸಮ್ಮೇಳನ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ತಮ್ಮ ಅನುಭವ ಮಂಟಪದಲ್ಲಿ ಹೆಚ್ಚು ಸ್ಥಾನಮಾನ ನೀಡಿದ್ದರು. ಅದನ್ನು ಇಂದು ನಾವು ತಿಳಿದುಕೊಂಡು ಆಚರಣೆಗೆ ತರಬೇಕಾಗಿದೆ ಎಂದರು.
ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರಾದ ಕುಂಟೆಪ್ಪ ಗೌರಿಪುರ ಮಾತನಾಡಿ “ಬೀದರನಲ್ಲಿ ನಡೆದ 13ನೇ ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ ಬೀದರನಲ್ಲಿ ಯಶಸ್ವಿಯಾಗಿ ಜರುಗಿತು. ಪದಾಧಿಕಾರಿಗಳ ಪರಿಶ್ರಮವೇ ಇದಕ್ಕೆ ಕಾರಣ ಎಂದರು.
ಜನಸೇವಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ಜಲಾದೆ ಮಾತನಾಡಿ “ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು. ಆಗ ಮಾತ್ರ ಗುರುವಾಗಲು ಸಾಧ್ಯ ಎಂದು ನುಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸದಸ್ಯ ಶ್ರೀಶೈಲ ಗೂಳಿ ಹಾಗೂ ಪ್ರಕಾಶ ಲಕ್ಕಶೆಟ್ಟಿ ಮಾತನಾಡಿ “ಸಮ್ಮೇಳನದ ಯಶಸ್ವಿಗಾಗಿ ಹಗಲಿರುಳು ದುಡಿದ ಎಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ವಂದಿಸಿ ಅಭಿನಂದನೆಗಳನ್ನು ಸಲ್ಲಿಸಿದರು.” ಇದೇ ವೇಳೆ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಮಂಜುನಾಥ ಬೆಳೆಕೆರೆ ನಿರೂಪಿಸಿದರು. ಗುಂಡಪ್ಪ ಹುಡಗೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯೆ ಶ್ರೀಮತಿ ಮೀನಾಕ್ಷಿ ಕುಡಸೋಮಣ್ಣನವರ, ಶಿಕ್ಷಣಾಧಿಕಾರಿಗಳಾದ ಟಿ.ಆರ್.ದೊಡ್ಡೆ, ಈ ಬಸವರಾಜ, ಬಾಬುರಾವ ದಾನಿ, ದೇವಿಪ್ರಸಾದ ಕಲಾಲ, ಸಂತೋಷ ಮಂಗಳೂರೆ, ಪಾಂಡುರಂಗ ಬೆಲ್ದಾರ, ಸಂಜೀವಕುಮಾರ ಸ್ವಾಮಿ ಸೇರಿದಂತೆ ಅನೇಕರು ಉಪಸ್ತಿತರಿದ್ದರು.