ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ

ದಾವಣಗೆರೆ ಮಾ.9;: ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದುವರೆದು ಸಮಾಜದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಹೇಳಿದರು.ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ವಿಶೇಷವಾದ ಸ್ಥಾನಮಾನಗಳಿಗೆ ಪಾತ್ರರಾಗಿದ್ದರೂ ಒದಗಿ ಬರುವ ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಮಾಡುವತ್ತ ಗಮನಹರಿಸದರು. ದುಡಿಯುವ ಮಹಿಳೆಯರು  ಅವರ ಹಕ್ಕಿಗಾಗಿ ಧ್ವನಿಯೆತ್ತಿದ್ದರು ಪರಿಣಾಮವಾಗಿ ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮೀಸಲಾತಿ ಪಡೆದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ  ಎಂದರು.ಅಂದಿನ ದಿನಗಳಲ್ಲಿ ಮಹಿಳೆಯರಿಂದ ಪುರುಷರಿಗಿಂತ ಹೆಚ್ಚಾಗಿ ದುಡಿಸಿಕೊಂಡು ಕಡಿಮೆ ವೇತನ ನೀಡಿ, ಕೀಳಾಗಿ ಕಾಣಲಾಗುತ್ತಿತ್ತು. ಶೋಷಣೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆಯರು ಪ್ರಪಂಚದಲ್ಲಿ ಮಹಿಳೆಯರ ಅಸ್ತಿತ್ವ ಉಳಿಯಬೇಕಾದರೆ ಸಂಘಟಿತರಾಗಬೇಕು. ಸ್ತ್ರೀ ಅಬಲೆ ಅಲ್ಲ ಸಬಲೆ. ಹೆಣ್ಣಿನ ಅಸ್ತಿತ್ವವನ್ನು ಮಹಿಳೆಯರೇ ಉಳಿಸಬೇಕು ಎಂದು ಮಹಿಳೆಯರ ಮತದಾನಕ್ಕೆ, ಸಮಾನ ಕೆಲಸಕ್ಕೆ, ಸಮಾನ ವೇತನಕ್ಕಾಗಿ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಿದರು.ವೇದ ಕಾಲದಲ್ಲಿರದ ಲಿಂಗ ತಾರತಮ್ಯವು ನಂತರದ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಅಸ್ತಿತ್ವ ಪಡೆದು ಮಹಿಳೆಯರನ್ನು ಹತ್ತಿಕ್ಕಲು ಆರಂಭಿಸಿತು. ಪುರುಷ ಪ್ರಧಾನ ಸಮಾಜವು ಸ್ತ್ರೀ ಸಮಾನತೆಯನ್ನು ಕಸಿದುಕೊಂಡು ಅತೀ ಹೆಚ್ಚು ಶೋಷಣೆಗೆ ಒಳಪಡಿಸಿ, ದೌರ್ಜನ್ಯವೆಸಗಿತು. ಇಂತಹ ಧಾರುಣ ಸ್ಥಿತಿಯಲ್ಲಿ ಅಕ್ಕಮಹಾದೇವಿ ಸೇರಿದಂತೆ ಎಲ್ಲಾ ಶಿವಶರಣೆಯರು ಕ್ರಾಂತಿಕಾರಿ ಕಹಳೆಯನ್ನು ಊದಿ, ಆಧ್ಯಾತ್ಮದತ್ತ ಹೆಜ್ಜೆ ಹಾಕಿದರು. ಮಹಿಳೆಯರ ದಿನಾಚರಣೆಯಂದು ಕೇವಲ ಮಹಿಳೆಯನರಷ್ಟೆ ಅಲ್ಲದೆ ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ದಯಾನಂದ ಸರಸ್ವತಿ, ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್ ರಂತಹ ಗಣ್ಯ ವ್ಯಕ್ತಿಗಳನ್ನು ಸ್ಮರಿಸುವುದು ಅಗತ್ಯ ಎಂದರು.