ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ: ಶೆಟ್ಟರ್

ಹುಬ್ಬಳ್ಳಿ,ಜು20 : ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ದುರ್ಬಲ, ಶೋಷಿತ ವರ್ಗದವರಿಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಮಂತ್ರಿ ಸ್ವನಿಧಿ ಮಹೋತ್ಸವ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆಯು ವ್ಯಾಪಾರ ಮಾಡಲು 45 ವಲಯಗಳಲ್ಲಿ ಸ್ಥಳಗಳನ್ನು ಗುರುತಿಸಿದೆ. ಈ ಹಿಂದೆ ಸಾಲ ಸೌಲಭ್ಯ ನೀಡಲು ಬ್ಯಾಂಕ್ ಗಳು ಮುಂದೆ ಬರುತ್ತಿರಲಿಲ್ಲ. ಈಗ ಲೀಡ್ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿದೆ. ಸಾಲ ಸೌಲಭ್ಯ ಪಡೆಯಲು ಇದ್ದ ಸಿಬಿಲ್ ಮಿತಿಯನ್ನು ಸಹ ತೆಗೆದು ಹಾಕಲಾಗಿದೆ. ಖಾಸಗಿ ವ್ಯಕ್ತಿಗಳಿಂದ ಬಡ್ಡಿ ಸಾಲ ಪಡೆಯುವುದರಿಂದ ವ್ಯಾಪಾರಸ್ಥರಿಗೆ ಶೋಷಣೆಯಾಗುತ್ತಿದೆ. ಹೆಚ್ಚು ಬಂಡವಾಳ ಹಾಕದೇ ಸರ್ಕಾರದ ಯೋಜನೆಗಳ ಲಾಭವನ್ನು ಎಲ್ಲರೂ ಪಡೆದುಕೊಳ್ಳಲು ಮುಂದಾಗಬೇಕು. ಸಣ್ಣ ಕೈಗಾರಿಕೆಗಳು ಹೆಚ್ಚು ಉದ್ಯೋಗಾವಕಾಶವನ್ನು ಒದಗಿಸುತ್ತವೆ ಎಂದು ತಿಳಿಸಿದರು.
ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಕೋವಿಡ್ ನಂತರ ಬೀದಿ ಬದಿ ವ್ಯಾಪಾರಸ್ಥರು ಸ್ವಾವಲಂಬಿಯಾಗಿ ವ್ಯಾಪಾರ ಕೈಗೊಳ್ಳಲು ಈ ಯೋಜನೆ ಸಹಾಯಕವಾಗಿದೆ. ಸಾಲವು ನೇರವಾಗಿ ವ್ಯಾಪಾರಸ್ಥರಿಗೆ ದೊರೆಯಲಿದೆ. ಕಡ್ಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಬೀದಿ ಬದಿ ವ್ಯಾಪಾರಸ್ಥರು ಯಶಸ್ವಿ ಉದ್ಯಮಿಗಳಾಗಬೇಕು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅಣ್ಣಯ್ಯ ಆರ್, ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಉಪ ಮಹಾಪೌರ ಉಮಾ ಮುಕುಂದ, ವಿರೋಧಪಕ್ಷದ ನಾಯಕ ರಾಜಾರಾವ ಮನ್ನೆಕುಂಟ್ಲ, ಪಾಲಿಕೆಯ ಸದಸ್ಯರಾದ ರೂಪಾ ಶೆಟ್ಟಿ, ಶಿವು ಮೆಣಸಿನಕಾಯಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಕ್ಕಮಹಾದೇವಿ ಶೆಟ್ಟರ್, ಪಾಲಿಕೆ ಸದಸ್ಯರು, ಹುಬ್ಬಳ್ಳಿ ಧಾರವಾಡದ ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.