ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಕಲಬುರಗಿ,ಮೇ.29: ಮಹಿಳೆಯರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿಂತೆ ಯಾವುದೇ ಸಮಸ್ಯೆಯಿದ್ದರೆ ಹಿಂಜರಿಕೆಯ ಮನೋಭಾವದಿಂದ ವೈದ್ಯರನ್ನು ಕಾಣದೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದು ಮುಂದೆ ಅವರಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಏನಾದರೂ ಸಮಸ್ಯೆಯಿದ್ದರೆ ಮುಜುಗರ ಪಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ, ಸಲಹೆ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಮಹಿಳೆಯರಿಗೆ ಸಲಹೆ ನೀಡಿದರು.
ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಇವುಗಳ ಸಹಯೋಗದೊಂದಿಗೆ ನಗರದ ಶೇಖರೋಜಾದಲ್ಲಿರುವ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಜರುಗಿದ ‘ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಸಿಕ ಋತುಸ್ರಾವದ ಸಮಸ್ಯೆಯಿರುವವರು, ಅದರಲ್ಲಿಯೂ ಬಿಳಿ ಸೆರಗಿನ ತೊಂದರೆಯಿಂದ ಬಳಲುತ್ತಿರುವವರು, ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದು ಮುಂದೆ ಕ್ಯಾನ್ಸರ್‍ವಾಗಿ ಪರಿವರ್ತನೆಯಾಗುತ್ತದೆ. ರಕ್ತಸ್ರಾವ, ಮೈಗ್ರೇನ್, ಅಶಕ್ತತೆಯಂತಹ ಮುಂತಾದ ಸಾಮಾನ್ಯ ಸಮಸ್ಯೆಗಳು ಮಹಿಳೆಯರಲ್ಲಿ ಕಂಡುಬರುತ್ತವೆ. ನಿಯಮಿತವಾಗಿ ಆಹಾರ, ನಿದ್ರೆ, ಶುದ್ಧವಾದ ಕುಡಿಯುವ ನೀರಿನ ಸೇವನೆ, ವಿಶ್ರಾಂತಿ, ಯೋಗ, ಧ್ಯಾನ, ವ್ಯಾಯಾಮ ಮಾಡಬೇಕು. ಮಹಿಳೆಯರು ಹೆಚ್ಚಾಗಿ ಹಸಿರು ತರಕಾರಿ,ಹಣ್ಣುಗಳು, ಮೊಳಕೆ ಕಾಳುಗಳ ಸೇವನೆ ಮಾಡಬೇಕು. ನಿಯಮಿತವಾಗಿ ವಿಶ್ರಾಂತಿ ಪಡೆಯಬೇಕು. ಎಡಬದಿಯ ಮಗ್ಗಲಿಗೆ ಮಲಗುವುದು ಉತ್ತಮ. ವಿಶೇಷವಾಗಿ ಹದಿಹರಿಯದ ಹೆಣ್ಣುಮಕ್ಕಳು ತಮ್ಮ ಸಮಸ್ಯೆಗಳನ್ನು ಬಹಳ ಜಾಗರಕತೆಯಿಂದ ಪರಿಹರಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹವನ್ನು ಮಾಡುವ ಮೂಲಕ ಮುಂದೆ ಆಕೆಯು ಅನೇಕ ಸಮಸ್ಯೆಗಳನ್ನು ಎದುರಿಸುವ ಹಾಗೆ ಮಾಡಲಾಗುತ್ತಿದೆ. ಇದರಿಂದ ಆಕೆಯು ಬೇಗನೆ ಗರ್ಭವತಿಯಾಗಿ ಹೆರಿಗೆಯ ಸಂದರ್ಭದಲ್ಲಿ ರಕ್ತಸ್ರಾವವಾಗಿ, ಹಿಮೋಗ್ಲೋಬಿನ್ ಕೊರತೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆಯಾಗಿ, ಅಂತಿಮವಾಗಿ ಸಾವು ಕೂಡಾ ಸಂಭವಿಸುವ ಸಂದರ್ಭ ಬರುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕು.
ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ಗಂಗಾಜ್ಯೋತಿ ಗಂಜಿ, ಚಂದಮ್ಮ ಮರಾಠಾ, ಜಗನ್ನಾಥ ಗುತ್ತೇದಾರ, ಗುರುರಾಜ ಖೈನೂರ್, ರೇಷ್ಮಾ ಆರ್.ನಕ್ಕುಂದಿ, ಸಂಗಮ್ಮ ಅತನೂರ, ಲಕ್ಷ್ಮೀ ಮೈಲಾರಿ, ಅರ್ಚನಾ ಸಿಂಗೆ, ಶ್ರೀದೇವಿ ಸಾಗರ, ಸಾವಿತ್ರಿ, ನಾಗಮ್ಮ ಇದ್ದರು.