
ಕಲಬುರಗಿ:ಮಾ.10: ಸಮಾಜ ಮಹಿಳೆಯರ ಬಗ್ಗೆ ಸಹಾನುಭೂತಿ ತೋರಿದರೆ ಸಾಲದು. ಅವಳಿಗೆ ಅವಕಾಶಗಳನ್ನು ನೀಡಿ, ಮಹಿಳಾ ಸಬಲೀಕರಣದ ನೈಜ ಅನುಷ್ಠಾನವಾಗಬೇಕು. ಮಹಿಳೆಯರು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡಿ ಹೆಚ್ಚಿನ ಸಾಧನೆ ಮಾಡುವಂತೆ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಹೇಳಿದರು.
ನಗರದ ಬಿದ್ದಾಪುರ ಕಾಲನಿಯಲ್ಲಿರುವ ಆಶ್ರಮದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯು ತುಂಬಾ ತಾಳ್ಮೆಶಕ್ತಿಯನ್ನು ಹೊಂದಿದ್ದಾಳೆ. ಅಚಲ ಛಲಗಾರಿಕೆ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ, ದೇವರ ಹೆಸರಿನಲ್ಲಿನ ಹರಕೆಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಮಹಿಳೆಯರು ಮೊದಲು ಮೌಢ್ಯತೆಯಿಂದ ಹೊರಬನ್ನಿ. ಮಹಿಳಾ ಸಮಾನತೆಗೆ ಬಸವಾದಿ ಶರಣರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಮಲಾಬಾಯಿ ಕರೂಟೆ, ಸಿದ್ದಮ್ಮ ಬೇಲಿ, ನೀಲಮ್ಮ ಬಾಬಾ, ರೇಖಾ ಹಡಲಗಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ನೀಲಕಂಠಯ್ಯ ಹಿರೇಮಠ, ಭೀಮಾಶಂಕರ ಬಾಬಾ, ನಾಗಣ್ಣ ಕಲಶೆಟ್ಟಿ, ಮಲ್ಲಿಕಾರ್ಜುನ ರೋಣದ, ಪ್ರತೀಕ್ಷಾ, ಪ್ರಗತಿ ಸೇರಿದಂತೆ ಬಡಾವಣೆಯ ಅನೇಕರು ಪಾಲ್ಗೊಂಡಿದ್ದರು.