ಮಹಿಳೆಯರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಕೆಲಸವಾಗಬೇಕು

ಮಂಗಳೂರು, ನ.೬- ಮಹಿಳೆ ಯರ ಅಭಿವೃದ್ಧಿಗಾಗಿ ಸರಕಾರ ರೂಪಿಸುವ ಪ್ರತಿಯೊಂದು ಯೋಜನೆಗಳ ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ ಟೆಂಗಳಿ ಹೇಳಿದರು.
ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ನಡೆದ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಉದ್ಯೋಗಿನಿ ಯೋಜನೆಯಡಿ ಸಾಕಷ್ಟು ಮಹಿಳೆಯರು ಟೈಲರಿಂಗ್, ಬಟ್ಟೆ ವ್ಯಾಪಾರ, ದಿನಸಿ ಅಂಗಡಿ, ಕ್ಯಾಂಟೀನ್, ಬ್ಯೂಟಿ ಪಾರ್ಲರ್, ಕಲಾ ಆಟ್ರ್ಸ್, ಜೆರಾಕ್ಸ್ ಅಂಗಡಿ ಹೈನುಗಾರಿಕೆ, ರಿಕ್ಷಾ ಚಾಲನೆ, ಟ್ಯೂಶನ್ ಕ್ಲಾಸ್, ತರಕಾರಿ ವ್ಯಾಪಾರ, ಕೃಷಿ, ಬೇಕರಿ ತಿಂಡಿ ತಯಾರಿ, ಟಯರ್ ಪಂಚರ್ ರಿಪೇರಿ, ಹಪ್ಪಳ ಸಂಡಿಗೆ, ಉಪ್ಪಿನಕಾಯಿ ತಯಾರಿಕೆ ಫ್ಯಾನ್ಸಿ ಅಂಗಡಿ, ಕಂಪ್ಯೂಟರ್ ತರಬೇತಿ, ಪ್ರಿಂಟಿಂಗ್, ಎಳನೀರು ವ್ಯಾಪಾರ ಹೀಗೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ವಿಷಯ. ಸರಕಾರ ಮಹಿಳೆಯರ ಸಬಲೀಕರಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಎಲ್ಲಾ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮತ್ತಷ್ಟು ಪ್ರಗತಿ ಸಾಧಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಟಾಟಾ ಬೋವಿ ಮಾತನಾಡಿ, ಜಿಲ್ಲೆಯಲ್ಲಿ ೨೦೧೯-೨೦ನೇ ಸಾಲಿನಲ್ಲಿ ಉದ್ಯೋಗಿನ ಯೋಜನೆಯಡಿ ವಿವಿಧ ಚಟುವಟಿಕೆಗಳಲ್ಲಿ ೧೪೪ ರಲ್ಲಿ ೭೩ ಪ್ರಗತಿ ಸಾಧಿಸಿದೆ. ಕಿರುಸಾಲ ಯೋಜನೆಯಡಿ ಹಾಳೆತಟ್ಟೆ, ಹೈನುಗಾರಿಕೆ, ಕೃಷಿ, ಬಟ್ಟೆ ವ್ಯಾಪಾರ, ತರಕಾರಿ ಮತ್ತು ಐಸ್‌ಕ್ರೀಂ ಮಾರಾಟ, ಕೋಳಿ ಸಾಕಾಣಿಕೆ ಚಟುವಟಿಕೆಗಳಿಗೆ ಮಹಿಳೆಯರು ನೆರವು ಪಡೆದಿದ್ದಾರೆ ಎಂದರು.
ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಬೀದಿಬದಿ ವ್ಯಾಪಾರ ನಡೆಸಲು ಗ್ರಾಮ ಪಂಚಾಯತ್‌ಗಳಲ್ಲಿ ಸರ್ಟಿಫಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ ಇದರಿಂದ ಸಾಕಷ್ಟು ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ ಟೆಂಗಳಿ ಅವರು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಈ ಸಭೆಯಲ್ಲಿ ಸಮೃದ್ಧಿ ಯೋಜನೆಯಡಿ ೫ ಫಲಾನುಭವಿಗಳಿಗೆ ಹಾಗೂ ಉದ್ಯೋಗಿನಿ ಯೋಜನೆಯಡಿ ೭ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಜಿಲ್ಲೆಯ ವಿವಿಧ ಘಟಕ ಭೇಟಿನೀಡಿ ಮುಕ್ಕದಲ್ಲಿ ಸಮೃದ್ಧಿ ಯೋಜನೆಯಡಿ ಬೀದಿಬದಿ ಮೀನು ಮಾರಾಟ ಮಾಡುತ್ತಿರುವ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ನಿರೂಪಣಾಧಿಕಾರಿ ಶ್ಯಾಮಲಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ
ಪ್ರವೀಣ್ ಅಧಿಕಾರಿಗಳು ಉಪಸ್ಥಿತರಿದ್ದರು.